ಆಧಿ ಪರ್ವ ಭಾಗ 27, ದ್ರೌಪದಿಯ ಸ್ವಯಂವರದ ಕುರಿತು ಜನರ ಕೂತೂಹಲ, ನಗರ ಪ್ರದಕ್ಷಿಣೆಗೆ ಬಂದ ಪಾಂಡವರು..

7,831

ಕಾಂಪಿಲ್ಯಕ್ಕೆ ಬಂದು ಸೇರಿದ ಪಾಂಡವರು ಬ್ರಾಹ್ಮಣ ವೇಷದಿಂದ ಕುಂಬಾರನೊಬ್ಬನ ಮನೆಯಲ್ಲಿ ಇಳಿದುಕೊಂಡು,  ಭಿಕ್ಷಾಟನೆಯಿಂದ ಜೀವಿಸುತ್ತ, ನಗರಪ್ರದಕ್ಷಿಣೆಯ ನೆಪದಲ್ಲಿ ಸುದ್ದಿಸಂಗ್ರಹ ಮಾಡತೊಡಗಿದರು.ಪಾಂಡವರು ಖಂಡಿತ ಬದುಕಿರುವರೆಂಬುದು ತಮ್ಮ ರಾಜನ ನಂಬಿಕೆಯೆಂದೂ,  ಋಷಿಗಳು ಹೇಳಿರುವಂತೆ ದ್ರೌಪದಿಯ ಸ್ವಯಂವರಕ್ಕೆ ಅರ್ಜುನನು ಬಂದೇ ಬರುತ್ತಾನೆಂದೂ, ಅವನನ್ನು ಗುರುತಿಸುವುದಕ್ಕಾಗಿಯೇ ಸ್ವಯಂವರ ಮಂಟಪದಲ್ಲಿ ಮಹಾಧನುಸ್ಸೊಂದನ್ನಿಟ್ಟು, ಮೇಲೆ ತಿರುಗುತ್ತಿರುವ ಮೀನಿನ ಲಕ್ಷ್ಯವೊಂದನ್ನಿಟ್ಟು, ಯಾರು ಧನುಸ್ಸಿಗೆ ಹೆದೆಯೇರಿಸಿ ಆ ಲಕ್ಷ್ಯವನ್ನು ಐದು ಬಾಣಗಳಿಂದ ಕೆಡಹುವರೋ ಅವನು ದ್ರೌಪದಿಯನ್ನು ಗೆದ್ದುಕೊಂಡಂತೆ ಎಂಬುದಾಗಿ ಪ್ರಕಟಿಸಿರುವನೆಂದೂ ಪುರಜನರು ಮಾತನಾಡಿಕೊಳ್ಳುತ್ತಿದ್ದರು.ಅರ್ಜುನನನ್ನುಳಿದು ಇತರರು ಯಾರಿಗೂ ಈ ಗುರಿ ಅಸಾಧ್ಯವೆಂದು ಅವರ ಅಭಿಪ್ರಾಯವಾಗಿದ್ದಿತು.ಎಲ್ಲರೂ ಸ್ವಯಂವರ ದಿನದ ಅಗಮನವನ್ನೇ ಕಾಯುತ್ತಿದ್ದರು.  ಭರತಖಂಡದ ಮೂಲೆಮೂಲೆಗಳಿಂದಲೂ ರಾಜರುಗಳು ಸ್ವಯಂವರಕ್ಕಾಗಿ ಬಂದು ನೆರೆದಿದ್ದರು.  ರಾಧೇಯನ ಜೊತೆಯಲ್ಲಿ ದುರ್ಯೋಧನಾದಿ ಕೌರವರು ಈಗಾಗಲೇ ಬಂದಿದ್ದರು.  ಯಾದವರು,ಭೋಜರು,ಅಂಧಕರು,ವೃಷ್ಣಿಗಳು ಎಲ್ಲರೂ ನೆರೆದಿದ್ದರು.ಬಲರಾಮ ಕೃಷ್ಣರು ಸಹ ಅಲ್ಲಿದ್ದರು. ಬಹು ಮಾನ್ಯ ಅತಿಥಿಗಳಿಗಾಗಿ ಮಹಾ ಸೌಧಗಳೇ ಅಲ್ಲಿ ನಿರ್ಮಾಣಗೊಂಡಿದ್ದವು. ಅತಿಥಿಸತ್ಕಾರಕ್ಕಾಗಿ ದಾಸದಾಸಿಯರ ಗುಂಪೇ ಸಜ್ಜಾಗಿದ್ದಿತು. 

ಸ್ವಯಂವರದ ದಿನ ಮಂಟಪವು ಇಂದ್ರನ ಆಸ್ಥಾನದಂತೆ ಕಂಗೊಳಿಸುತ್ತಿದ್ದಿತು. ಗಂಧ ಪುಷ್ಪ ಧೂಪದೀಪಾಗಳಿಂದ ಹಾಗು ನಿರೀಕ್ಷೆಯಿಂದ ಎಲ್ಲರೂ ಪುಳಕಿತರಾಗಿದ್ದರು. ಪುರುಷಸಿಂಹರಂತಿದ್ದ ರಾಜರುಗಳು ತಮ್ಮ ತಮ್ಮ ಅಸ್ತ್ರಗಳೊಂದಿಗೆ ಶೋಭಿಸುತ್ತಿದ್ದರು. ನೋಡುವುದಕ್ಕೆಂದು ಬಂದು ನೆರೆದಿದ್ದ ದೇವತೆಗಳಿಂದ ಅಂತರಿಕ್ಷವು ತುಂಬಿಹೋಗಿದ್ದಿತು. ಅದೊಂದು ಮರೆಯಲಾಗದಂತಹ ಅದ್ಭುತ ದೃಶ್ಯವಾಗಿದ್ದಿತು. ಎಲ್ಲರೂ ದ್ರೌಪದಿಯ ಸೌಂದರ್ಯವನ್ನೂ ಅವಳ ಕೈ ಹಿಡಿಯಲಿರುವ ಪುಣ್ಯವಂತನನ್ನೂ ನೋಡಲು ತವಕಿಸುತ್ತಿದ್ದರು. ಬ್ರಾಹ್ಮಣರ ಗುಂಪಿನಲ್ಲಿ ಪಾಂಡವರು ಯಾರ ಗಮನವನ್ನೂ ಸೆಳೆಯದೆ ಅಲ್ಲೊಬ್ಬರು ಇಲ್ಲೊಬ್ಬರಂತೆ ಹರಡಿ ಕುಳಿತುಕೊಂಡಿದ್ದರು.  ಎಲ್ಲರ ಕಣ್ಣೂ ಒಳಗಿನ ಬಾಗಿಲ ಕಡೆಗೆ. ಧೃಷ್ಟದ್ಯುಮ್ನನು ಸುಂದರವಾದ ರೇಷ್ಮೆಯ ಸೀರೆಯಲ್ಲಿ ರತ್ನಾಭರಣಗಳೊಡನೆ ದಿವ್ಯವಾಗಿ ಶೋಭಿಸುತ್ತಿದ್ದ ತನ್ನ ಪ್ರೀತಿಯ ತಂಗಿಯನ್ನು ಆಸ್ಥಾನಕ್ಕೆ ಕರೆತರುತ್ತಿದ್ದನು. ಅವಳು ಮುಗುಳ್ನಗುತ್ತ ಪುಷ್ಪಹಾರವನ್ನು ಕೈಯಲ್ಲಿ ಹಿಡಿದು ಲಜ್ಜೆಯ ಮಂದಗಮನದಿಂದ ಬರುತಿದ್ದಳು. ಮಂಟಪದ ಮಧ್ಯೆ ವಿಶೇಷವಾಗಿ ನಿರ್ಮಿತವಾದ ರಂಗಕ್ಕೆ ಧೃಷ್ಟದ್ಯುಮ್ನನು ಅವಳನ್ನು ಕರೆತಂದನು. ದ್ರೌಪದಿಯು ಆ ಕ್ಷಣದಿಂದ ಪ್ರಾರಂಭಿಸಿ ಕೊನೆಯ ಅಂಕದವರೆಗೂ ಒಂದು ದೈವೀನಾಟಕದ ಕೇಂದ್ರಬಿಂದುವಾಗಿ ಉಳಿದಳು. ಆವಳು ಹುಟ್ಟಿದ್ದೇ ಕ್ಷತ್ರಿಯರ ಸಂಹಾರಾರ್ಥವಾಗಿ;  ಅದನ್ನು ಮುಂದೆ ಕಾಲವು ಸಾಧಿಸಲಿರುವುದು. 

ವೇದಘೋಷವಾಯಿತು,ಹವನವಾಯಿತು.ಎಲ್ಲೆಲ್ಲೂ ಪ್ರಶಾಂತತೆ ನೆಲೆಸಿತ್ತು. ಧೃಷ್ಟದ್ಯುಮ್ನನು ರಂಗಕ್ಕೆ ಬಂದು,  ಮೇಘಗರ್ಜನೆಯಂತಹ ಗಂಭೀರ ಧ್ವನಿಯಲ್ಲಿ, “ಮಹಾಜನರು ಲಾಲಿಸಬೇಕು.  ಈ ದಿವ್ಯಧನುಸ್ಸನ್ನೂ ಈ ಐದು ಬಾಣಗಳನ್ನೂ ಬಳಸಿ ಮೇಲೆ ಕಾಣುವ ಮತ್ಸ್ಯಲಕ್ಷ್ಯವನ್ನು ಬೀಳಿಸಬೇಕು. ಈ ಸಾಹಸವನ್ನು ಸಾಧಿಸಿದವನನ್ನು ನನ್ನ ತಂಗಿ ದ್ರೌಪದಿಯು ವರಿಸಲಿರುವಳು.  ಇದು ನನ್ನ ಪ್ರತಿಜ್ಞೆ”ಎಂದು ಪ್ರಕಟಿಸಿದನು. ನಂತರ ತಂಗಿಯ ಬಳಿಗೆ ಹೋಗಿ ರಾಜರನ್ನೆಲ್ಲ ಒಬ್ಬೊಬ್ಬರನ್ನಾಗಿ ಪರಿಚಯಿಸತೊಡಗಿದನು. “ಭದ್ರೆ, ನೋಡು.ಅದೋ, ಅಲ್ಲಿ ಕುಳಿತಿರುವವನು ಕುರುರಾಜ ದುರ್ಯೋಧನ; ಪಕ್ಕದಲ್ಲಿರುವವರು ಅವನ ಸೋದರರು.  ಅವನ ಪ್ರೀತಿಯ ಸ್ನೇಹಿತ ರಾಧೇಯನು ಅಲ್ಲಿರುವನು.  ಅದೋ, ಅವನು ಶಕುನಿ. ನಂತರದವನು ದ್ರೋಣ ಪುತ್ರನಾದ ಅಶ್ವತ್ಥಾಮ.ಅವನು ಭಗದತ್ತ, ಅವನು ಶಾಲ್ಯ,  ಅವನು ಜರಾಸಂಧ. ಅವನೇ ರೋಹಿಣಿಯ ಮಗ ಬಲರಾಮ; ಅವನೇ ದೇವಕೀಪುತ್ರನಾದ ಕೃಷ್ಣ; ಅವನು ಸಾತ್ಯಕಿ;ಅವನು ಕೃತವರ್ಮ; ಅವನು ಚೇದಿರಾಜ ಶಿಶುಪಾಲ.ಅವನೇ ದುರ್ಯೋಧನನ ಭಾವನಾದ ಸಿಂಧುರಾಜ ಜಯದ್ರಥ”

ಪರಿಚಯವು ಹೀಗೇ ಬಹಳ ಹೊತ್ತು ಸಾಗಿತು. ನಂತರ  ರಾಜರುಗಳು ಒಬ್ಬೊಬ್ಬರಾಗಿ ಧನುಸ್ಸಿನ ಬಳಿಗೆ ಬಂದು ಅದನ್ನು ಹೆದೆಯೇರಿಸುವುದಕ್ಕೆ ಪ್ರಯತ್ನಿಸಿದರು; ತಮ್ಮಿಂದಾಗದೆ ಅವನತಮುಖರಾಗಿ ಹಿಂದಿರುಗಿದರು. ಯಾದವರು ಕೇವಲ ಪ್ರೇಕ್ಷಕರಾಗಿರಲು ನಿರ್ಧರಿಸಿಕೊಂಡೇ ಬಂದಿದ್ದರು. ಕೃಷ್ಣನು ಸಭೆಯಲ್ಲಿ ನೆರೆದವರನ್ನು ಸಿಂಹಾವಲೋಕನ ಮಾಡುತ್ತಿದ್ದನು. ಕೊನೆಗೊಮ್ಮೆ ಅವನ ದೃಷ್ಟಿಯು ಬ್ರಾಹ್ಮಣ ಸಮುದಾಯದಲ್ಲಿ ಮಾರುವೇಷದಿಂದ ಕುಳಿತಿದ್ದ ಪಾಂಡವರ ಮೇಲೆ ಬಿದ್ದಿತು. “ಅಣ್ಣ, ಅಲ್ಲಿ ನೋಡು ಬೂದಿಮುಚ್ಚಿದ ಕೆಂಡಗಳಂತಿರುವ ಆ ಬ್ರಾಹ್ಮಣವೇಷಧಾರಿಗಳನ್ನು.ಅವರು ಪಾಂಡವರಲ್ಲದೆ ಬೇರೆಯಲ್ಲ. ಈಗ ಏನು ನಡೆಯುವುದೆಂದು ಕಾದು ನೋಡೋಣ” ಎಂದು ಬಲರಾಮನಿಗೆ ತೋರಿಸಿದನು. ಪಾಂಡವರು ಬದುಕಿರುವರೆಂದೇ ಅವನು ಯಾದವರನ್ನೆಲ್ಲ ಪ್ರೇಕ್ಷಕರನ್ನಾಗಿಸಿದ್ದು. ಸ್ಪರ್ಧೆ ಮುಂದುವರೆಯಿತು. ಒಬ್ಬರಾದ ಮೇಲೊಬ್ಬರಂತೆ ರಾಜರುಗಳು ಪ್ರಯತ್ನಿಸಿ ಸೋತರು.  ಶಿಶುಪಾಲನಂಥ ಕೆಲವರು ಗುರಿಯನ್ನು ಸಾಸಿವೆಕಾಳಿನಷ್ಟು ಅಂತರದಿಂದ ತಪ್ಪಿದರು.  ಜರಾಸಂಧನೂ ಬಹು ಕಡಿಮೆ ಅಂತರದಿಂದ ಸೋತನು.  ದುರ್ಯೋಧನನು ಕಿರುಬೆರಳ ಅಂತರದಿಂದ ಸೋತನು.ಮಹಾ ಬಿಲ್ಲುಗಾರರೆನಿಸಿಕೊಂಡವರೆಲ್ಲರೂ ಸೋಲಲು,ರಾಜರೆಲ್ಲ ನಿರಾಶರಾದರು.ಈಗ ರಾಧೇಯನು ಚಿರತೆಯಂತೆ ಮೇಲೆದ್ದು ಬಂದನು.

ಕೃಷ್ಣನು ಆತಂಕದಿಂದ ಅವನು ಹೆದೆಯೇರಿಸುವುದನ್ನೇ ನೋಡುತ್ತಿದ್ದನು. ಅವನು ಗುರಿಯಿಡುತ್ತಿರುವಾಗಲಂತೂ ಕೃಷ್ಣನು ಉಸಿರು ಬಿಗಿಹಿಡಿದನು.ಅರ್ಜುನ ನಿಲ್ಲದಿರುವಾಗ ಭಾರ್ಗವಶಿಷ್ಯನಾದ ರಾಧೇಯನಿಗೆ  ಸಮಾನರಾರು?ಎಂದು ಎಲ್ಲರೂ ಮಾತನಾಡಿಕೊಂಡರು. ಅವನ ಗುರಿಯೂ ಕೂದಲೆಳೆಯಷ್ಟು ಅಂತರದಿಂದ ತಪ್ಪಿತು.ಕೃಷ್ಣನಿಗೆ ಈಗ ನಿರಾತಂಕವಾಯಿತು.  ರಾಧೇಯನೂ ಸೋತಮೇಲೆ ಯಾರೊಬ್ಬರೂ ಮುಂದೆ ಬರಲಿಲ್ಲ. ಇದ್ದಕ್ಕಿದ್ದಂತೆ ಪ್ರಜ್ವಲಿಸಿದ ಬೆಂಕಿಯಂತೆ ಅರ್ಜುನ ಮೇಲೆದ್ದು ನಿಂತನು. ಇದನ್ನೇ ಕಾಯುತ್ತಿದ್ದ ಕೃಷ್ಣನು ಉದ್ವೇಗದಿಂದ ಬಲರಾಮನ ಕೈಹಿಡಿದು ಅದುಮಿದನು. ಎಲ್ಲರ ದೃಷ್ಟಿಯೂ ಈ ಬ್ರಾಹ್ಮಣ ತರುಣನ ಕಡೆಗೆ ತಿರುಗಿತು.  ಕೃಷ್ಣ,ಬಲರಾಮ,ಧೌಮ್ಯ,ಭೀಷ್ಮರ ಹೊರತಾಗಿ ಯಾರಿಗೂ ಅವನಾರೆಂದು ಗೊತ್ತಿರಲಿಲ್ಲ.  ಅರ್ಜುನನು ರಂಗಕ್ಕೆ ಬಂದು ಧೃಷ್ಟದ್ಯುಮ್ನನನ್ನು “ಕ್ಷತ್ರಿಯರಾರೂ ಈ ಮತ್ಸ್ಯಯಂತ್ರವನ್ನು ಭೇದಿಸುವಂತೆ ತೋರಲಿಲ್ಲ. ಬ್ರಾಹ್ಮಣರು ಪ್ರಯತ್ನಿಸಬಹುದೆ?”  ಎಂದು ಕೇಳಿದನು.ಯುವರಾಜ ಧೃಷ್ಟದ್ಯುಮ್ನನು “ಓಹೋ,ಖಂಡಿತವಾಗಿ. ಚತುರ್ವರ್ಣದವರಲ್ಲಿ ಯಾರು ಬೇಕಾದರೂ ಪ್ರಯತ್ನಿಸಬಹುದು. ಮೇಲೆ ಕಾಣುವ ಆ ಮೀನನ್ನು ಹೊಡೆದು ಬೀಳಿಸಿದರೆ ನನ್ನ ತಂಗಿ ನಿನ್ನವಳಾಗುವಳು. ನನ್ನ ಪ್ರತಿಜ್ಞೆ ಸತ್ಯವಾದದ್ದು” ಎಂದನು. ಅರ್ಜುನನು ಆ ಮಹಾಧನುಸ್ಸಿನ ಬಳಿಗೆ ಹೋಗಿ ಅದಕ್ಕೆ ಪ್ರದಕ್ಷಿಣೆ ಬಂದು ನಮಸ್ಕರಿಸಿದನು.ಮುಗುಳ್ನಗುತ್ತ ಹೆದೆಯೇರಿಸಿ ಐದು ಬಾಣಗಳನ್ನೂ ಒಂದಾದ ಮೇಲೊಂದರಂತೆ ಮೀನಿನ ಕಣ್ಣಿನೊಳಗೆ ತೂರಿಸಿಯೇ ಬಿಟ್ಟನು! ಲಕ್ಷ್ಯವು ಭೂಮಿಗೆ ಬಿದ್ದಿತು. ಕೂಡಲೆ ಕೋಟಿಸಿಡಿಲುಗಳು ಮೊಳಗಿದಂತೆ ಕರತಾಡನವಾಯಿತು.  ಬ್ರಾಹ್ಮಣರು ತಮ್ಮತಮ್ಮ ಉತ್ತರೀಯಗಳನ್ನು ಹಾರಿಸಿ ಕುಣಿದರು. ಆಕಾಶದಿಂದ ಪುಷ್ಪವೃಷ್ಟಿಯಾಯಿತು. ದೇವದುಂದುಭಿ ಮೊಳಗಿತು. ಹಂಸಗಮನದಿಂದ ದ್ರೌಪದಿಯು ನಡೆದುಬಂದು ಪುಷ್ಪ ಮಾಲೆಯನ್ನು ಅರ್ಜುನನ ಕೊರಳಿಗೆ ಹಾಕಿದಳು.ಕಹಳೆ ಕೊಂಬು ಶಂಖ ಭೇರಿ ಮುಂತಾದ ವಾದ್ಯಗಳು ಮೊಳಗಿದವು. ದ್ರೌಪದಿ ಅರ್ಜುನರು ಶಚೀಂದ್ರರಂತೆ, ರತಿಮನ್ಮಥರಂತೆ,ಉಷಾಸೂರ್ಯರಂತೆ,ಸ್ವಾಹಾಗ್ನಿಯರಂತೆ, ವಿಷ್ಣುಲಕ್ಷ್ಮಿಯರಂತೆ,ಉಮಾಶಂಕರರಂತೆ, ಸೀತಾರಾಮರಂತೆ, ನಳ ದಮಯಂತಿಯರಂತೆ ಶೋಭಿಸಿದರು. ದ್ರೌಪದಿಯ ಕೈಹಿಡಿದು ರಂಗದಿಂದ ಇಳಿಯುತಿದ್ದ ತರುಣನನ್ನು ನೋಡಿ ದ್ರುಪದನು ಸಂತೋಷಪಟ್ಟನು. ಕ್ಷಣಮಾತ್ರ ಸ್ತಂಭಿತರಾದಂತಿದ್ದ ಕ್ಷತ್ರಿಯರೆಲ್ಲ ಈಗ ಕೋಪೋದ್ದೀಪಿತರಾಗಿ ಮೇಲೆದ್ದು ನಿಂತರು.”ದ್ರುಪದನು ನಮ್ಮನ್ನು ಅವಮಾನಿಸಿದ್ದಾನೆ. ಕ್ಷತ್ರಿಯರಾರೂ ಸ್ಪರ್ಧೆಯಲ್ಲಿ ಗೆಲ್ಲದಿದ್ದರೆ ಅವನ ಮಗಳು ಬ್ರಾಹ್ಮಣನ ಕೈಹಿಡಿಯುವುದರ ಬದಲು ಅಗ್ನಿಪ್ರವೇಶ ಮಾಡಬೇಕಾಗಿತ್ತು. ಈ ಅವಮಾನಕ್ಕಾಗಿ ದ್ರುಪದನನ್ನು ಕೊಲ್ಲೋಣ” ಎಂದು ಕೂಗತೊಡಗಿದರು. ದ್ರುಪದನು ಇದೆಲ್ಲಕ್ಕೂ ಕಾರಣನಾದ ಬ್ರಾಹ್ಮಣ ತರುಣನ ಕಡೆಗೆ ನೋಡಿದನು.ಅವನು ನಕ್ಕು, “ಭಯಪಡಬೇಡಿ.ಇವರೆಲ್ಲರನ್ನೂ ನಾನು ನಿವಾರಿಸುವೆನು”  ಎನ್ನುವುದರೊಳಗೆ ಭೀಮನು ಅವನ ಪಕ್ಕದಲ್ಲಿ ಬಂದು ನಿಂತನು. ದ್ರೌಪದಿಯು ಅವರಿಬ್ಬರ ಹಿಂದೆ ನಿಂತಳು. ತುಮುಲಯುದ್ದವಾರಂಭವಾಯಿತು. ಶಲ್ಯ ದುರ್ಯೋಧನ ಶಕುನಿ ಎಲ್ಲರೂ ಸೋಲಲು, ರಾಧೇಯನು ಅವರ ನೆರವಿಗೆ ಬಂದನು. ಅರ್ಜುನನು ಅವನನ್ನೆದುರಿಸಿ ಸೋಲಿಸಿದನು.  ಅವನ ಹಸ್ತಕೌಶಲವನ್ನು ಮೆಚ್ಚಿದ ರಾಧೇಯನು, “ಯಾರು ನಿನು ವಿಪ್ರೋತ್ತಮ? ನನ್ನ ಎದುರು ನಿಲ್ಲಬಲ್ಲವನು ಅರ್ಜುನನೊಬ್ಬನೇ;ಅವನೀಗ ಸತ್ತುಹೋಗಿರುವನು.ನೀನೇನು ಇಂದ್ರನೋ, ಭಾರ್ಗವನೋ,ವಿಷ್ಣುವೋ?ನಾನು ಅಂಗರಾಜನಾದ ರಾಧೇಯನು.  ನಿನ್ನೆದುರು ನಾನು ಸೋತೆ!”  ಎಂದನು.ಅರ್ಜುನನು, “ರಾಧೇಯ,ನಾನೊಬ್ಬ ಸಾಮಾನ್ಯ ಬ್ರಾಹ್ಮಣ; ಬ್ರಾಹ್ಮಣನೊಬ್ಬನ ಶಿಷ್ಯ ಅಷ್ಟೆ!” ಎಂದು ಅಲ್ಲಿಂದ ಹೊರಟನು.

ದ್ರೌಪದಿಯೊದಿಗೆ ಪಾಂಡವರು ಕುಂಬಾರನ ಮನೆಯನ್ನು ಸೇರಿದರು. ಹಾಸ್ಯಕ್ಕಾಗಿ “ಅಮ್ಮ, ಭಿಕ್ಷೆ ತಂದಿರುವೆವು” ಎಂದು ಕೂಗಿ ಹೇಳಿದರು. ಒಳಗಿದ್ದ ಕುಂತಿಯು, “ಎಲ್ಲರೂ ಹಂಚಿಕೊಳ್ಳಿರಿ”ಎಂದುಬಿಟ್ಟಳು. ಹೊರಗೆ ಬಂದವಳೇ ದ್ರೌಪದಿಯನ್ನು ಕಂಡು ಸ್ತಂಭಿತಳಾದಳು. ಆದರೂ ಸಾವರಿಸಿಕೊಂಡು ದ್ರೌಪದಿಯನ್ನು ಆಲಿಂಗಿಸಿಕೊಂಡು, ನೆತ್ತಿಯನ್ನು ಆಘ್ರಾಣಿಸಿ, “ಮಗುವೆ, ನಿನಗೆ ನಮ್ಮ ಮನೆಗೆ ಸ್ವಾಗತ”  ಎಂದಳು. ಯುಧಿಷ್ಠಿರನು ನಡೆದುದೆಲ್ಲವನ್ನೂ ವಿವರಿಸಿದನು. ಕುಂತಿಯು”ಅಯ್ಯೋ, ಮಗನೆ,ನಾನೇನು ಹೇಳಿಬಿಟ್ಟೆ! ನಾನೆಂದೂ ಅನೃತವನ್ನು ನುಡಿದವಳಲ್ಲ.  ನನ್ನ ಮಾತಿನ ಪರಿಣಾಮವೇನಾಗುವುದೋ!” ಎಂದು ಆತಂಕಪಟ್ಟಳು.  ಯುಧಿಷ್ಠಿರನು, “ಅಮ್ಮ, ಚಿಂತಿಸದಿರು.ಏನೂ ಆಗದಂತೆ ನಾನು ನೋಡಿಕೊಳ್ಳುತ್ತೇನೆ”  ಎಂದು ಸಮಾಧಾನ ಹೇಳಿ ಅರ್ಜುನನಿಗೆ “ನೀನು ಸ್ಪರ್ಧೆಯಲ್ಲಿ ಗೆದ್ದಿರುವೆ; ಇವಳನ್ನು ನೀನು ಮದುವೆಯಾಗು” ಎನ್ನಲು,ಅರ್ಜುನನು “ಅಣ್ಣ, ನೀನು ಹಿರಿಯನು. ನೀನೇ ಇವಳನ್ನು ಮದುವೆಯಾಗು. ನಂತರ ಭೀಮನು ಮದುವೆಯಾಗಬೇಕು. ಅನಂತರವೇ ನನ್ನ ಸರದಿ” ಎಂದುಬಿಟ್ಟನು. ಯುಧಿಷ್ಠಿರನು ಸ್ವಲ್ಪಹೊತ್ತು ಯೋಚಿಸಿ  “ನಾವೆಲ್ಲರೂ ಹಂಚಿಕೊಳ್ಳಬೇಕೆಂದು  ತಾಯಿ ಹೇಳಿರುವಳು. ತಾಯಿಯ ಮಾತಿಗಿಂತ ದೊಡ್ಡದೇನಿದೆ?  ತಾಯಿಯೇ ನಮ್ಮ ಗುರುವು.  ಅವಳ ಮಾತನ್ನು ನಡೆಸೋಣ. ನಾನೆಂದೂ ತಪ್ಪಾಗಿ ಯೋಚಿಸಿದವನೇ ಅಲ್ಲ. ನಿಜಸಂಗತಿಯೆಂದರೆ,ನಾವು ಐವರೂ ಈ ದ್ರೌಪದಿಯನ್ನು ಪ್ರೀತಿಸುತ್ತಿರುವಂತಿದೆ.ಎಲ್ಲರೂ ಒಟ್ಟಿಗೇ ಅವಳನ್ನು ಮದುವೆಯಾಗೋಣ.ಇದರ ಬಗ್ಗೆ ಇನ್ನು ವಾಗ್ವಾದ ಬೇಡವೇ ಬೇಡ” ಎಂದು ತೀರ್ಮಾನ ಕೊಟ್ಟನು.

ಕೃಪೆ:ಡಾ.ಎಚ್.ರಾಮಚಂದ್ರ ಸ್ವಾಮಿ(ರಾಮಕೃಷ್ಣ ಆಶ್ರಮ, ಮೈಸೂರು)

ಸಂಗ್ರಹ:ಬಾಲನಾಗಮ್ಮ.ಡಿ
ಸ.ಹಿ.ಪ್ರಾ.ಶಾ. ಚುಕ್ಕನಕಲ್ )

ಸಮಗ್ರಾಭಿವೃದ್ಧಿ ನ್ಯೂಸ್ ಡೆಸ್ಕ್

Leave A Reply

Your email address will not be published.