ಅಮೆರಿಕ ವಿಮಾನ ನಿಲ್ದಾಣದಲ್ಲಿ ಕಳ್ಳತನ “ಈ” ಕೋಟ್ಯಧೀಶ ಭಾರತೀಯ ಮೂಲದ ಹೋಟೆಲ್ ಉದ್ಯಮಿ ಚಟ!

4,721

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಮಾಜಿ ಪಾಲುದಾರ, ಭಾರತೀಯ ಮೂಲದ ಹೋಟೆಲ್ ಉದ್ಯಮಿ ಅಮೆರಿಕದ ವಿಮಾನ ನಿಲ್ದಾಣದಲ್ಲಿ ಲಗೇಜ್ ಕದ್ದು ಸಿಕ್ಕಿಬಿದ್ದ ಘಟನೆ ನಡೆದಿದೆ.

ಈ ಹಿಂದೆ ಡೊನಾಲ್ಡ್ ಟ್ರಂಪ್ ಕುಟುಂಬದ ಒಡೆತನದ ನಾಲ್ಕು ಹೋಟೆಲ್ ಗಳಲ್ಲಿ ದಿನೇಶ್ ಚಾವ್ಲಾ ಪಾಲುದಾರರಾಗಿದ್ದರು. ಅಷ್ಟೇ ಅಲ್ಲ ಚಾವ್ಲಾ ಗ್ರೂಪ್ ಆಫ್ ಹೋಟೆಲ್ ಗಳ ಸಿಇಒ ಕೂಡಾ ಹೌದು.ಕಳೆದ ವಾರ ಮೆಂಫೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾವ್ಲಾ ಕದ್ದ ಸೂಟ್ ಕೇಸ್ ಅನ್ನು ಕಾರಿನೊಳಗೆ ಇಟ್ಟುಕೊಂಡಿದ್ದು ಪೊಲೀಸರ ಗಮನಕ್ಕೆ ಬಂದಿತ್ತು. ಬಳಿಕ ಚಾವ್ಲಾ ವಿಮಾನದಲ್ಲಿ ಪ್ರಯಾಣಿಸಿದ್ದರು.

ವಿಮಾನ ನಿಲ್ದಾಣ ಪೊಲೀಸರು ಕಾರನ್ನು ಶೋಧಿಸಿದಾಗ ಸೂಟ್ ಕೇಸ್ ಪತ್ತೆಯಾಗಿತ್ತು ಎಂದು ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಚಾವ್ಲಾ ಹಿಂತಿರುಗಿದ ವೇಳೆ ಮೆಂಫೀಸ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಎರಡು ಬ್ಯಾಗ್ ಅನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಅಂದಾಜು ಮೊತ್ತ 4 ಸಾವಿರ ಡಾಲರ್ ಮೌಲ್ಯದ ವಸ್ತುಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗೆ ಹಲವು ಬಾರಿ ಲಗೇಜ್ ಅನ್ನು ಕಳ್ಳತನ ಮಾಡುತ್ತಿರುವುದಾಗಿ ಚಾವ್ಲಾ ತನಿಖೆ ವೇಳೆ ಬಾಯ್ಬಿಟ್ಟಿದ್ದು, ಉಳಿದ ಕಳ್ಳತನದ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ ಎಂದು ವರದಿ ವಿವರಿಸಿದೆ.ಲಗೇಜ್ ಕಳ್ಳತನ ಮಾಡುವುದು ತಪ್ಪು ಎಂಬುದು ಗೊತ್ತಿತ್ತು, ಆದರೆ ಕುತೂಹಲ ಮತ್ತು ರೋಮಾಂಚನಕ್ಕಾಗಿ ಈ ಕೃತ್ಯ ಎಸಗುತ್ತಿರುವುದಾಗಿ ಚಾವ್ಲಾ ಹೇಳಿರುವುದಾಗಿ ವರದಿ ತಿಳಿಸಿದೆ.

ಚಾವ್ಲಾ ಹಾಗೂ ಸಹೋದರ ಸುರೇಶ್ ಚಾವ್ಲಾ ಡೆಲ್ಟಾದಲ್ಲಿ ಗ್ರೂಪ್ ಆಫ್ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಕ್ಲೇವ್ ಲ್ಯಾಂಡ್ ನಲ್ಲಿ ಐಶಾರಾಮಿ ಹೋಟೆಲ್ ಹೊಂದಿದ್ದಾರೆ ಎಂದು ವರದಿ ಹೇಳಿದೆ.

1988ರಿಂದಲೂ ಟ್ರಂಪ್ ಜೊತೆ ಚಾವ್ಲಾ ಕುಟುಂಬಕ್ಕೆ ನಂಟು ಬೆಳೆದಿತ್ತು. 88ರಲ್ಲಿ ಚಾವ್ಲಾ ತಂದೆ ಗ್ರೀನ್ ವುಡ್ ನಲ್ಲಿ ಉದ್ಯಮ ನಡೆಸಲು ಟ್ರಂಪ್ ನೆರವು ಕೇಳಿದ್ದರು. ಅಲ್ಲಿಂದ ಟ್ರಂಪ್ ಮತ್ತು ಚಾವ್ಲಾ ಕುಟುಂಬ ನಿಕಟವರ್ತಿಯಾಗಿದ್ದು, ಹಲವು ಹೋಟೆಲ್ ಗಳಲ್ಲಿ ಪಾಲುದಾರರು ಕೂಡಾ ಆಗಿದ್ದರು. ಆದರೆ 2019ರ ಫೆಬ್ರುವರಿಯಲ್ಲಿ ಟ್ರಂಪ್ ಸಹೋದರರಾದ ಟ್ರಂಪ್ ಜ್ಯೂನಿಯರ್ ಹಾಗೂ ಎರಿಕ್ ಪಾಲುದಾರಿಕೆಯ ಶೇರುಗಳನ್ನು ವಾಪಸ್ ಪಡೆದಿದ್ದರು.

Leave A Reply

Your email address will not be published.