ಅಲ್‍ಖೈದಾ ಕುಖ್ಯಾತ ನಾಯಕ ಬಿನ್‍ಲಾಡೆನ್ ಪುತ್ರ ಹಂಜಾ ಸಾವು..!

5,771

ವಾಷಿಂಗ್ಟನ್, ಆ.1-ಅಮೆರಿಕದ ವಿಶ್ವ ವಾಣಿಜ್ಯಕೇಂದ್ರದ ಅವಳಿ ಗೋಪುರದ ಮೇಲೆ ದಾಳಿ ನಡೆಸಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಅಲ್‍ಖೈದ ಉಗ್ರಗಾಮಿ ಸಂಘಟನೆ ಸುಪ್ರಸಿದ್ದ ನಾಯಕ ವಸಮಾ ಬಿನ್‍ಲಾಡೆನ್ ಪುತ್ರ ಮತ್ತು ಜಾಗತಿಕ ಭಯೋತ್ಪಾದಕ ಹಂಜಾ (30) ಮೃತಪಟ್ಟಿದ್ದಾನೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಹಂಜಾ ಎಲ್ಲಿ, ಯಾವಾಗ ಮತ್ತು ಹೇಗೆ ಸಾವಿಗೀಡಾದ ಎಂಬ ಬಗ್ಗೆ ಖಚಿತ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಹತನಾದ ತಮ್ಮ ತಂದೆಯಂತೆ ಅಲ್‍ಖೈದ ಉಗ್ರಗಾಮಿ ಸಂಘಟನೆಯ ಯುವ ನಾಯಕನಾಗಿ ಹಲವು ಕೃತ್ಯಗಳಲ್ಲಿ ಶಾಮೀಲಾಗಿದ್ದ ಹಂಜಾನನ್ನು 2017ರಲ್ಲಿ ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು.

ಕಳೆದ ಫೆಬ್ರವರಿಯಲ್ಲಿ ಹಂಜಾನ ಪತ್ತೆಗೆ ಅಥವಾ ಆತ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ದಶಲಕ್ಷ ಡಾಲರ್ ನಗದು ಬಹುಮಾನ ನೀಡುವುದಾಗಿ ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಘೋಷಿಸಿತ್ತು.

ತನ್ನ ತಂದೆಯನ್ನು ಹತ್ಯೆ ಮಾಡಿದ ಅಮೆರಿಕ ಸೇನಾ ಪಡೆಗಳ ವಿರುದ್ಧ ವಿಧ್ವಂಸ ಕೃತ್ಯಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಆಗಾಗ ಹಂಜಾ ಘೋಷಿಸುತ್ತಲೇ ಇದ್ದ. ಕೆಲ ಕಾಲ ಇರಾನ್ ಮತ್ತು ಪಾಕಿಸ್ತಾನದಲ್ಲಿದ್ದ ಈತ ಬಳಿಕ ಆಫ್ಘಾನಿಸ್ಥಾನದಲ್ಲೂ ನೆಲೆಯೂರಿದ್ದ.

ಈಗ ಈತ ಹತನಾಗಿರುವುದು ಅಲ್‍ಖೈದ ಉಗ್ರಗಾಮಿ ಸಂಘಟನೆಗೆ ಭಾರೀ ಹೊಡೆತ ಬಿದ್ದಂತಾಗಿದೆ. ಹಂಜಾ ಸಾವಿನ ಬಗ್ಗೆ ಮಾಧ್ಯಮ ಪತ್ರಿಕೆಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವನ್ನು ಮಾತಿಗೆಳೆದಾಗ ಈ ಬಗ್ಗೆ ನಾನು ಸದ್ಯಕ್ಕೆ ಪ್ರತಿಕ್ರಿಯಿಸಲಾರೆ ಎಂದಷ್ಟೇ ಹೇಳಿದರು. ಹಂಜಾ ಸಾವಿನ ಬಗ್ಗೆ ಸದ್ಯದಲ್ಲೇ ಎಲ್ಲಾ ವಿವರಗಳು ಹೊರ ಬೀಳುವ ನಿರೀಕ್ಷೆ ಇದೆ.

Leave A Reply

Your email address will not be published.