ಮೈಸೂರಿನ ದೊಡ್ಡ ಕೆರೆಯನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲು ಆಗ್ರಹ

4,706

ಮೈಸೂರು, ಜುಲೈ 18: ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ 1904 (ಕೇಂದ್ರ) ಮತ್ತು 1925 (ಮೈಸೂರು)ರ ಅಡಿಯಲ್ಲಿ ಮೈಸೂರಿನ ದೊಡ್ಡಕೆರೆಯ ಗೋಪುರವನ್ನು “ಸಂರಕ್ಷಿತ ಸ್ಮಾರಕ” ಎಂದು ಘೋಷಿಸುವಂತೆ ಬೆಳಕು ಸಂಸ್ಥೆಯ ಸಂಸ್ಥಾಪಕ ಕೆ.ಎಂ ನಿಶಾಂತ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಇತಿಹಾಸ ಪ್ರಸಿದ್ಧ ದೊಡ್ಡ ಕೆರೆ ಇತ್ತು ಎನ್ನಲು ಏಕೈಕ ಕುರುಹಾಗಿ ಉಳಿದಿರುವ ಗೋಪುರ ಅಳಿವಿನ ಅಂಚಿಗೆ ತಲುಪಿದೆ. ಈಗಿನ ದೊಡ್ಡಕೆರೆ ಫುಟ್ಬಾಲ್ ಮೈದಾನ, ದಸರಾ ವಸ್ತುಪ್ರದರ್ಶನ ಮೈದಾನ ಮತ್ತು ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆ ಸೇರಿದಂತೆ ಹರಿಶ್ಚಂದ್ರ ಘಾಟ್ ವರೆಗೂ ವ್ಯಾಪಿಸಿತ್ತು ಎಂದರು.

ಜೋಡಿ ನಂದಿ ವಿಗ್ರಹ ನೋಡಲು ಸ್ವಲ್ಪ ದಿನದಲ್ಲೇ ಯದುವೀರ್ ಭೇಟಿ

ನಮ್ಮ ಮೈಸೂರಿನ ಇತಿಹಾಸ ಪ್ರಸಿದ್ಧ ದೊಡ್ಡ ಕೆರೆ. ಇದನ್ನು ಸುಮಾರು 180 ವರ್ಷಗಳ ಹಿಂದೆ ದೊಡ್ಡದೇವರಾಜ ಒಡೆಯರ್ ಅವರ ನೆನಪಿನಾರ್ಥ ಮುಮ್ಮಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದರು ಎಂದು ಕೆಲವು ಪುರಾವೆಗಳು ಹೇಳಿದರೆ, ಇನ್ನೂ ಕೆಲವು ದಾಖಲೆಗಳಲ್ಲಿ ಸ್ವತಃ ದೊಡ್ಡದೇವರಾಜ ಒಡೆಯರ್ ಅವರೇ ಸುಮಾರು 300 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವುದಾಗಿ ತಿಳಿಯುತ್ತದೆ ಎಂದು ಹೇಳಿದರು.

ಕೆಆರ್ ಎಸ್ ಡ್ಯಾಮ್ ನಿರ್ಮಾಣವಾಗುವುದಕ್ಕೂ ಮೊದಲು ಮೈಸೂರು ಅರಮನೆಯೂ ಸೇರಿದಂತೆ ನಗರದ ಬಹುತೇಕ ಕಡೆಗಳಿಗೆ ದೊಡ್ಡ ಕೆರೆಯಿಂದಲೇ ನೀರು ಸರಬರಾಜು ಆಗುತ್ತಿತ್ತು. ಈ ಕೆರೆಯ ನಾಲ್ಕು ದಿಕ್ಕುಗಳಲ್ಲೂ ಗೋಪುರಗಳನ್ನು ನಿರ್ಮಿಸಿ, ನೀರಿನ ಹೊರ ಹರಿವಿಗೆ ಕಲ್ಲಿನ ಬಾಗಿಲುಗಳನ್ನಾಗಿ ಬಳಸುತ್ತಿದ್ದರು ಎಂದರು.

ಕುಕ್ಕರಹಳ್ಳಿ ಕೆರೆಯಲ್ಲೂ ಕಾಣಿಸಿಕೊಂಡಿದೆ ನೊರೆ…ಮುಂದೇನು?

ಮೈಸೂರಿನ ದೊಡ್ಡಕೆರೆ ಇತಿಹಾಸ ಪುಟಗಳನ್ನು ಸೇರಿದ ನಂತರ ಇಂದಿಗೂ ಅದರ ಏಕೈಕ ಕುರುಹಾಗಿ ಉಳಿದಿರುವಂಥದ್ದು ದಕ್ಷಿಣ ದಿಕ್ಕಿನ ಗೋಪುರ. ಇದು ನಗರದ ಊಟಿ ರಸ್ತೆ ಮತ್ತು ಹರಿಶ್ಚಂದ್ರ ಘಾಟ್ ರಸ್ತೆ ಮಧ್ಯಭಾಗದಲ್ಲಿ ಕಂಡುಬರುತ್ತದೆ. ಇದನ್ನು ಹಲವು ವರ್ಷಗಳ ಹಿಂದೆ ಗೋಪುರ ಉದ್ಯಾನವನವಾಗಿ ಅಭಿವೃದ್ಧಿಪಡಿಸಿದ್ದರು. ಆದರೆ ನಿರ್ವಹಣೆಯಿಲ್ಲದೆ ಪಾಳು ಬಿದ್ದಿತ್ತು ಎಂದು ನಿಶಾಂತ್ ಹೇಳಿದರು.

ಈಗ ಆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ಉದ್ಯಾನವನದ ಜಾಗವನ್ನು ಸ್ವಾಧೀನಪಡಿಸಿಕೊಂಡ ನಂತರ ಐತಿಹಾಸಿಕ ಗೋಪುರ ಅಳಿವಿನಂಚಿಗೆ ತಲುಪಿದೆ. ಹಾಗಾಗಿ ಕೂಡಲೇ ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನಗರದ ಪರಂಪರೆಯನ್ನು ಉಳಿಸುವ ಕೆಲಸವನ್ನು ಮಾಡಬೇಕು, ಇಂತಹ ಐತಿಹಾಸಿಕ ಕುರುಹುಗಳನ್ನು ಉಳಿಸಬೇಕು ಎಂದು ಅವರು ಆಗ್ರಹಿಸಿದರು.

Leave A Reply

Your email address will not be published.