ಪಟ್ಟ ಏರುವ ಮುನ್ನ ಖಾಸಗಿ ಅಂಗರಕ್ಷಕ ಪಡೆ ಮುಖ್ಯಸ್ಥೆಯನ್ನೇ ವಿವಾಹವಾದ ಥಾಯ್ ರಾಜ

4,401

ಬ್ಯಾಂಕಾಕ್: ಪಟ್ಟಾಭಿಷೇಕಕ್ಕೆ ಒಂದು ದಿನ ಮುಂಚಿತವಾಗಿ ಥಾಯ್ ಲ್ಯಾಂಡ್ ರಾಜ ವಜ್ರಲಂಗ್ ಕರ್ಣ ಬುಧವಾರ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿಬಿಟ್ಟಿದ್ದರು. ಅದಕ್ಕೆ ಕಾರಣ..ತಮ್ಮ ಖಾಸಗಿ ಭದ್ರತಾ ಪಡೆಯ ಉಪ ಮುಖ್ಯಸ್ಥೆಯನ್ನು ಮದುವೆಯಾಗಿರುವುದಾಗಿ ಘೋಷಿಸಿದ್ದು!

ರಾಜಮನೆತನದ ಗಝೆಟ್ ನಲ್ಲಿ ಬುಧವಾರ, ವಜ್ರಲಂಗ್ ಕರ್ಣ ಅವರು ಮದುವೆಯಾಗಿರುವ ಫೋಟೋಗಳನ್ನು ಪ್ರಕಟಿಸಿತ್ತು. ತದನಂತರ ರಾಜಮನೆತನಕ್ಕೆ ಸಂಬಂಧಿಸಿದ ಹಾಗು ಥಾಯ್ ನ್ಯೂಸ್ ಚಾನೆಲ್ ಗಳು ಕರ್ಣ ಅವರು ಬಾಡಿಗಾರ್ಡ್ ಸುಥಿಡಾ ಅವರನ್ನು ಮದುವೆಯಾದ ಸುದ್ದಿಯನ್ನು ಪ್ರಸಾರ ಮಾಡಿದ್ದವು ಎಂದು ವರದಿ ತಿಳಿಸಿದೆ.

2014ರಲ್ಲಿ ಸುಥಿಡಾ ಟಿಡ್ಜಾಯ್ ಅವರನ್ನು ವಜ್ರಲಂಗ್ ಅವರು ತಮ್ಮ ಅಂಗರಕ್ಷಕ ಪಡೆಯ ಡೆಪ್ಯುಟಿ ಕಮಾಂಡರ್ ಆಗಿ ನೇಮಕ ಮಾಡಿದ್ದರು. ಈಕೆ ಮೊದಲು ಥಾಯ್ ಏರ್ ವೇಸ್ ನಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸಿದ್ದರು. ಇವರಿಬ್ಬರ ನಡುವಿನ ಪ್ರೇಮ ಕಥಾನಕದ ಬಗ್ಗೆ ರಾಜಮನೆತನಕ್ಕೆ ಯಾವುದೇ ಸುಳಿವು ಇರಲಿಲ್ಲವಾಗಿತ್ತು ಎಂದು ಕೆಲವು ಮಾಧ್ಯಮಗಳ ವರದಿ ತಿಳಿಸಿದೆ. 2016ರಲ್ಲಿ ಸುಥಿಡಾ ಅವರನ್ನು ರಾಜಮನೆತನದ ಥಾಯ್ ಸೇನೆಗೆ ಜನರಲ್ ಆಗಿ ನೇಮಕ ಮಾಡಿದ್ದರು. ವಜ್ರಲಂಗ್ ಈಗಾಗಲೇ ಮದುವೆಯಾಗಿದ್ದು, 3 ಬಾರಿ ವಿಚ್ಛೇದನ ಪಡೆದಿದ್ದಾರೆ. ಒಟ್ಟು ಏಳು ಮಕ್ಕಳಿದ್ದಾರೆ.

ಯಾರು ಈ ವಜ್ರಲಂಗ್ ಕರ್ಣ?

66ರ ಹರೆಯದ ವಜ್ರಲಂಗ್ ಕರ್ಣ ಅವರನ್ನು ಥಾಯ್ ಲ್ಯಾಂಡ್ ನ ರಾಜ, 10ನೇ ರಾಮ ಎಂದೇ ಪರಿಗಣಿಸಲಾಗಿದೆ. 234 ವರ್ಷಗಳ ರಾಜಮನೆತನದ ಇತಿಹಾಸವಿರುವ ಚಕ್ರಿ ರಾಜವಂಶದ ಒಂಬತ್ತನೇ ರಾಮನಾಗಿ ಆಡಳಿತ ನಡೆಸಿದ್ದವರು ವಜ್ರಲಂಗ್ ತಂದೆ ಭೂಮಿಬಲ ಅತುಲ್ಯತೇಜ. 2016ರಲ್ಲಿ ಥಾಯ್ ಲ್ಯಾಂಡ್ ಅರಸ 9ನೇ ರಾಮ ಭೂಮಿಬಲ ಅವರು ವಿಧಿವಶರಾಗಿದ್ದರು. 1952ರ ಜುಲೈ 28ರಂದು ಭೂಮಿಬಲ ಮತ್ತು ರಾಣಿ ಸಿರಿಕಿಟ್ ದಂಪತಿಯ ಏಕೈಕ ಪುತ್ರನಾಗಿ ಜನಿಸಿದ್ದರು.

ಥಾಯ್ ಲ್ಯಾಂಡಿನಲ್ಲಿ ರಾಜ ಬದುಕಿರುವಾಗ ಆತನ ಉತ್ತರಾಧಿಕಾರಿಯ ಬಗ್ಗೆಯಾಗಲೀ ಅಥವಾ ಆತನ ಆರೋಗ್ಯದ ಬಗ್ಗೆ ಚರ್ಚೆ ನಡೆಸುವುದು ಕಾನೂನು ರೀತ್ಯಾ ಅಪರಾಧವಾಗಿತ್ತು. ತನ್ನ ಮಗನನ್ನು ಉತ್ತರಾಧಿಕಾರಿ ಎಂದು ಭೂಮಿಬಲ ಹಿಂದೊಮ್ಮೆ ಘೋಷಿಸಿದ್ದರೂ ಜನತೆಯ ಒಲವು ಅವರ ಕಡೆ ಅಷ್ಟಾಗಿ ಇಲ್ಲದಿರುವುದರಿಂದ ಉತ್ತರಾಧಿಕಾರಿ ಯಾರಾಗುತ್ತಾರೆಂಬ ವಿಚಾರದಲ್ಲಿ ಗೊಂದಲಗಳೇ ತುಂಬಿವೆ. ಆದರೂ ಕೊನೆಗೆ ತಾನು ರಾಜನಾಗುವುದಾಗಿ ಹೇಳಿದ್ದ ವಜ್ರಲಂಗ್, ಅದಕ್ಕಾಗಿ ಸಮಯ ಕೇಳಿದ್ದರು.

ಅರಸ ಭೂಮಿಬಲರ ನಿರ್ದೇಶನದಂತೆ ಕಳೆದ ಆಗಸ್ಟಿನಲ್ಲಿ ಹೊಸ ಸಂವಿಧಾನವನ್ನು ಸಾರ್ವಜನಿಕ ಅಭಿಪ್ರಾಯದ ಮೂಲಕ ಜಾರಿಗೆ ತರಲಾಗಿತ್ತು. ಸಾರ್ವಜನಿಕ ಅಭಿಪ್ರಾಯ ನಾಗರಿಕ ಸರ್ಕಾರದ ಕಡೆಗಿದ್ದರೂ ಪ್ರಧಾನಿ ಹಾಗೂ ಸಂಸದರನ್ನು ಚುನಾಯಿಸದೇ ಸೈನ್ಯವೇ ನೇಮಕ ಮಾಡುವಂತೆ ಸಂವಿಧಾನವನ್ನು ಬದಲಾಯಿಸಲಾಯಿತು.

ಹೀಗೆ ಜನತೆ ಚುನಾಯಿಸುವ, ಸರಕಾರದ ನೀತಿಯನ್ನು ವಿರೋಧಿಸುವ ಹಕ್ಕನ್ನು ಕಳೆದುಕೊಂಡಿತ್ತು. 2017ರಲ್ಲಿ ವಜ್ರಲಂಗ್ ಸಂವಿಧಾನದ ಕೆಲವು ಕಲಂಗಳನ್ನು ತಿದ್ದುಪಡಿ ಮಾಡಿಸಿದ್ದರು. ರಾಜಕೀಯ ಚಟುವಟಿಕೆಗೂ ಅಂಕುಶ ಹಾಕಿದ್ದರು. 2019ರಲ್ಲಿ ಥಾಯ್ ಪ್ರಧಾನಮಂತ್ರಿ ಅಭ್ಯರ್ಥಿ ತಾನು ಎಂದು ರಾಜ ವಜ್ರಲಂಗ್ ಅವರ ಹಿರಿಯ ಸಹೋದರಿ ಯುಬೋಲ್ ರತ್ನಾ ಕಣಕ್ಕಿಳಿದಿದ್ದರು. ಆದರೆ ರಾಜನ ಅಧಿಕಾರ ಉಪಯೋಗಿಸಿ ಎಮರ್ಜೆನ್ಸಿ ಜಾರಿ ಮಾಡಿದ ವಜ್ರಲಂಗ್, ಪ್ರಧಾನಿ ಅಭ್ಯರ್ಥಿ ಯುಬೋಲ್ ಅವರ ಅಭ್ಯರ್ಥಿತನವೇ ಸಂವಿಧಾನ ಬಾಹಿರ ಎಂದು ಆದೇಶ ಹೊರಡಿಸಿದ್ದರು. ಥಾಯ್ ಚುನಾವಣಾ ಆಯೋಗ ಕೂಡಾ ಆಕೆಯ ಉಮೇದುವಾರಿಕೆಯನ್ನು ಅಸಿಂಧುಗೊಳಿಸಿತ್ತು.

Leave A Reply

Your email address will not be published.