ದೀದಿಕಾಳಗಕ್ಕೆ ಸುಪ್ರೀಂ ಬ್ರೇಕ್

2,619

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಠಕ್ಕೆ ಬಿದ್ದು, ಕೋಲ್ಕತ ಪೊಲೀಸ್ ಆಯುಕ್ತರ ವಿಚಾರಣೆಗಾಗಿ ಆಗಮಿಸಿದ್ದ ಸಿಬಿಐ ಅಧಿಕಾರಿಗಳನ್ನೇ ವಶಕ್ಕೆ ಪಡೆಯುವ ಮೂಲಕ ಕೇಂದ್ರ ಸರ್ಕಾರದ ಜತೆಗೆ ಸುಪ್ರೀಂಕೋರ್ಟ್​ಗೂ ಸೆಡ್ಡು ಹೊಡೆದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮುಖಭಂಗವಾಗಿದೆ. ಶಾರದಾ ಚಿಟ್​ಫಂಡ್ ಮತ್ತು ರೋಸ್​ವ್ಯಾಲಿ ಹಗರಣಗಳ ತನಿಖೆಗೆ ಸಂಬಂಧಿಸಿ ಆರೋಪಿ ಸ್ಥಾನದಲ್ಲಿರುವ ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಸಿಬಿಐ ಎದುರು ವಿಚಾರಣೆಗೆ ಹಾಜರಾಗಲೇಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಬಂಗಾಳ ಸರ್ಕಾರದ ನಡೆ ಖಂಡಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಗಳನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತು. ‘ವಾದ ಪ್ರತಿವಾದಗಳು ಏನೇ ಇರಲಿ. ಮೊದಲು ಕೋಲ್ಕತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿಶ್ವಾಸಪೂರ್ವಕವಾಗಿ ಸಿಬಿಐ ಎದುರು ವಿಚಾರಣೆಗೆ ಹಾಜರಾಗಬೇಕು. ಆದರೆ ಸದ್ಯಕ್ಕೆ ಅವರ ಬಂಧನಕ್ಕೆ ಸಿಬಿಐ ಮುಂದಾಗಬಾರದು. ಮೇಘಾಲಯದ ಶಿಲ್ಲಾಂಗ್​ನಲ್ಲಿ ರಾಜೀವ್ ವಿಚಾರಣೆ ಎದುರಿಸಲಿ’ ಎಂದು ಆದೇಶಿಸಿತು. ಇನ್ನು ಸಿಬಿಐ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ರಾಜೀವ್ ವಿರುದ್ಧ ಸಿಬಿಐ ಅಧಿಕಾರಿಗಳು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಮೂವರಿಗೂ ಫೆ. 18ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿ, ಫೆ.20ರಂದು ವಿಚಾರಣೆ ನಡೆಸುವುದಾಗಿ ಹೇಳಿತು.

ನಾಳೆ ಹೈಕೋರ್ಟ್ ವಿಚಾರಣೆ: ರಾಜೀವ್ ಕುಮಾರ್ ವಿರುದ್ಧ ಸಿಬಿಐ ಕ್ರಮ ಪ್ರಶ್ನಿಸಿ ಕೋಲ್ಕತ ಪೊಲೀಸರು ಹೈಕೋರ್ಟ್ ಮೊರೆಹೋಗಿದ್ದಾರೆ. ತುರ್ತು ವಿಚಾರಣೆ ಒತ್ತಾಯವನ್ನು ಹೈಕೋರ್ಟ್ ಪರಿಗಣಿಸಿಲ್ಲ. ಫೆ.7ಕ್ಕೆ ವಿಚಾರಣೆ ನಡೆಸುವುದಾಗಿ ಹೇಳಿದೆ.

Leave A Reply

Your email address will not be published.