ಕಿಸಾನ್ ಸಮ್ಮಾನ್ vs ಸಾಲಮನ್ನಾ

3,599

ಶ್ರೀನಗರ: ಕೇಂದ್ರ ಸರ್ಕಾರ ದೇಶದ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡುವ ಕಿಸಾನ್ ಸಮ್ಮಾನ್ ಯೋಜನೆ ಘೋಷಿಸಿದ ಬೆನ್ನಲ್ಲೇ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ತೀವ್ರಗೊಂಡಿದೆ. ಕಾಶ್ಮೀರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘2008-09ನೇ ಸಾಲಿನಲ್ಲಿ ರೈತರ 6 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಆದರೆ ಮನ್ನಾ ಮಾಡಿದ್ದು 52,000 ಕೋಟಿ ರೂ. ಮಾತ್ರ. ಈ ಮೂಲಕ ಜನರಿಗೆ ಕಾಂಗ್ರೆಸ್ ವಂಚಿಸಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ನಮ್ಮ ಸರ್ಕಾರ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 75000 ಕೋಟಿ ರೂ. ವರ್ಗಾಯಿಸಲಿದೆ’ ಎಂದು ಮೋದಿ ಹೇಳಿದರು.

ಜಮ್ಮುವಿನ ವಿಜಯಪುರದಲ್ಲಿ ಮತ್ತು ಶ್ರೀನಗರದ ಅವಂತಿಪೊರಾದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್್ಸ) ನಿರ್ವಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಈ ಹಿಂದೆ ನಾನು ಶಂಕುಸ್ಥಾಪನೆ ನೆರವೇರಿಸಿದ್ದ ಅನೇಕ ಯೋಜನೆಗಳನ್ನು ನಾನೇ ಉದ್ಘಾಟಿಸಿದ್ದೇನೆ. ಇಂದು ಶಂಕುಸ್ಥಾಪನೆ ಮಾಡಲಾದ ಯೋಜನೆಗಳಿಗೆ ಮುಂದೆಯೂ ನಾನೇ ಬಂದು ಉದ್ಘಾಟನೆ ನೆರವೇರಿಸುತ್ತೇನೆ’ ಎಂದರು.

ಬಿಜೆಪಿ ಹೊಸ ಘೋಷಣೆ
ಕಾಮ್ ಕರೇ ಜೋ, ಉಮ್ಮೀದ್ ಉಸಿ ಸೆ ಹೋ (ಕೆಲಸ ಮಾಡುವವರ ಮೇಲೆ ಮಾತ್ರ ನಿಮ್ಮ ನಿರೀಕ್ಷೆ ಇರಲಿ) ಎಂಬ ಘೋಷವಾಕ್ಯದೊಂದಿಗೆ ಲೋಕಸಭಾ ಚುನಾವಣೆ ಎದುರಿಸುವುದಾಗಿ ಬಿಜೆಪಿ ಹೇಳಿದೆ. ಭಾರತ್ ಕೇ ಮನ್ ಕೀ ಬಾತ್, ಮೋದಿ ಕೆ ಸಾಥ್ ಹೆಸರಿನ ಮಾಸಿಕ ಪ್ರಚಾರ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಪ್ರಣಾಳಿಕೆ (ಸಂಕಲ್ಪ ಪತ್ರ) ತಯಾರಿಕೆಗೆ ಈ ಅಭಿಯಾನ ನೆರವಾಗಲಿದೆ ಎಂದು ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದರು. 6357171717 ಸಂಖ್ಯೆಗೆ ಮಿಸ್ಡ್ ಕಾಲ್ ಅಥವಾ ವಾಟ್ಸ್ ಆಪ್ ಮೂಲಕ ಸಲಹೆ ನೀಡಬಹುದು.

ಸಂಕಲ್ಪ ಪತ್ರಕ್ಕೆ ಯಾತ್ರೆ:
#
 300 ವಾಹನಗಳಲ್ಲಿ ದೇಶಾದ್ಯಂತ ಸಂಚರಿಸಲಿವೆ 7,700 ಸಲಹೆ ಸಂಗ್ರಹಣೆ ಬಾಕ್ಸ್​ಗಳು
# 4000 ಲೋಕಸಭಾ ಕ್ಷೇತ್ರಗಳ ಜನರಿಂದ ಅಭಿಪ್ರಾಯ ಸಂಗ್ರಹ

ಲಡಾಖ್​ನ ಮೊದಲ ವಿವಿ ಉದ್ಘಾಟನೆ
ಕಣಿವೆ ರಾಜ್ಯದ ಲಡಾಖ್ ಪ್ರದೇಶದಲ್ಲಿ ಮೊಟ್ಟ ಮೊದಲ ವಿಶ್ವವಿದ್ಯಾಲಯವನ್ನು ಪ್ರಧಾನಿ ಉದ್ಘಾಟಿಸಿದರು. ಲೇಹ್, ಕಾರ್ಗಿಲ್, ನುಬ್ರಾ, ಝುಂಸ್ಕಾರ್, ಡ್ರಾಸ್ ಮತ್ತು ಖಾಲ್​ತ್ಸಿಯಲ್ಲಿ ಪದವಿ ಶಿಕ್ಷಣ ಕಾಲೇಜುಗಳನ್ನು ಹೊಂದುವ ಮೂಲಕ ರಾಜ್ಯದ ಮೊದಲ ಕ್ಲಸ್ಟರ್ ವಿವಿ ಎಂಬ ಶ್ರೇಯಕ್ಕೆ ಲಡಾಖ್ ವಿವಿ ಪಾತ್ರವಾಗಿದೆ.

ಶೇ.100 ವಿದ್ಯುದೀಕರಣ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಸೌಭಾಗ್ಯ’ ಯೋಜನೆ ಅನ್ವಯ ಜಮ್ಮು ಮತ್ತು ಕಾಶ್ಮೀರ ಶೇ. 100 ವಿದ್ಯುದೀಕರಣ ಸಾಧಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದರು.

ರಾಗಾ ಗುಡುಗು

ಪಟನಾ: ಬಿಹಾರದಲ್ಲಿ ಆರ್​ಜೆಡಿ ಜತೆಗೂಡಿ ಜನ ಆಕಾಂಕ್ಷಾ ರ‍್ಯಾಲಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರೈತರ ಕೃಷಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದಲ್ಲಿ ಸಾಲ ಮನ್ನಾ ಘೋಷಣೆ ಯಿಂದಾಗಿ ಅಧಿಕಾರ ಹಿಡಿದಿರುವ ಹುಮ್ಮಸ್ಸಿ ನಲ್ಲಿರುವ ರಾಹುಲ್ ಲೋಕಸಭಾ ಸಮರ ಗೆಲ್ಲಲು ಈ ಭರವಸೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಮಧ್ಯಪ್ರದೇಶ ಸಿಎಂ ಕಮಲನಾಥ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್​ಗಢ ಸಿಎಂ ಭೂಪೇಶ್ ಬಾಘೇಲ್, ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ರ್ಯಾಲಿಯಲ್ಲಿ ಭಾಗಿಯಾಗಿ ಮಹಾ ಮೈತ್ರಿ ಬಲಪ್ರದರ್ಶಿಸಿದ್ದಾರೆ.

ಪ್ರಧಾನಿ ವಿರುದ್ಧ ವಾಗ್ದಾಳಿ: ಹೋದ ಕಡೆಗಳಲೆಲ್ಲ ಪ್ರಧಾನಿ ಭರವಸೆಗಳನ್ನು ನೀಡುತ್ತಿರುತ್ತಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಹಾಗೆಯೇ. 15 ಲಕ್ಷ ರೂ. ನೀಡುವುದಾಗಿ ಬಿಹಾರ ಜನತೆಗೆ ಪ್ರಧಾನಿ ಆಶ್ವಾಸನೆ ನೀಡಿ ವಂಚಿಸಿದ್ದಾರೆ. ಅಚ್ಛೇ ದಿನ್ ಮುಗಿದುಹೋಗಿದೆ, ಇನ್ನೇನಿದ್ದರೂ ಚೌಕಿದಾರ್ ಚೋರ್ ಹೈ ಎನ್ನುವುದು ಹೊಸ ಘೋಷಣೆ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

Leave A Reply

Your email address will not be published.