ಲೋಕಪಾಲರ ನೇಮಕಕ್ಕೆ ಆಗ್ರಹಿಸಿ ಅಣ್ಣಾ ಹಜಾರೆ ನಿರಶನ ಆರಂಭ

5,960

ರಾಳೆಗಾನ್ ಸಿದ್ಧೀ(ಮಹಾರಾಷ್ಟ್ರ), ಜ.30-ಭ್ರಷ್ಟ್ಟಾಚಾರಗಳ ನಿಯಂತ್ರಣಕ್ಕಾಗಿ ಲೋಕಪಾಲರನ್ನು ತಕ್ಷಣ ನೇಮಕ ಮಾಡಬೇಕು ಹಾಗೂ ರಾಜ್ಯದ ಲೋಕಾಯುಕ್ತ ಕಾಯ್ದೆಗೆ ಅನುಮೋದನೆ ನೀಡಬೇಕೆಂದು ಸರ್ಕಾರಗಳನ್ನು ಆಗ್ರಹಿಸಿ ಖ್ಯಾತ ಸಾಮಾಜಿಕ ಕಾರ್ಯಕರ್ತ ಮತ್ತು ಹೋರಾಟಗಾರ ಅಣ್ಣಾ ಹಜಾರೆ ಇಂದಿನಿಂದ ಮಹಾರಾಷ್ಟ್ರದ ರಾಳೆಗಾನ್ ಸಿದ್ಧಿ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಲೋಕಪಾಲರ ನೇಮಕ ಮತ್ತು ಕಾಯ್ದೆ ಜಾರಿ ಬಗ್ಗೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ನೀಡಿದ್ದ ಆಶ್ವಾಸನೆ ಈಡೇರಿಲ್ಲ ಎಂದು ಆರೋಪಿಸಿ ಅಣ್ಣಾ ಆರಂಭಿಸಿರುವ ಅನಿರ್ದಿಷ್ಟ ನಿರಶನಕ್ಕೆ ಸಮಾಜ ಸೇವಕರು, ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು, ಯುವ ಜನರು, ಯುವಕರು, ವಿದ್ಯಾರ್ಥಿಗಳು, ರೈತರು ಮತ್ತು ಸಮಾಜದ ವಿವಿಧ ವರ್ಗಗಳ ಜನರು ಬೆಂಬಲ ಸೂಚಿಸಿ ಭಾಗವಹಿಸಿದ್ದಾರೆ.

ಮಹಾರಾಷ್ಟ್ರದ ಅಹಮದ್‍ನಗರ್ ಜಿಲ್ಲೆಯ ತಮ್ಮ ಸ್ವಗ್ರಾಮ ರಾಳೆಗಾನ್ ಸಿದ್ಧಿಯಲ್ಲಿರುವ ಪದ್ಮಾವತಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅಣ್ಣಾ ಅಸಂಖ್ಯಾತ ಜನರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಯಾದವ್‍ಬಾಬಾ ಮಂದಿರದ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿದ್ದ ಭರವಸೆ-ವಾಗ್ದಾನಗಳು ಈಡೇರಿಲ್ಲ. ತಮ್ಮ ಬೇಡಿಕೆಗಳು ಈಡೇರುವ ತನಕ ಅನಿರ್ದಿಷ್ಟ ನಿರಶನ ಮುಂದುವರಿಯಲಿದೆ ಎಂದು ಭ್ರಷ್ಟಾಚಾರ ನಿಗ್ರಹದ ಅದ್ಯ ಪ್ರವರ್ತಕರು ಘೋಷಿಸಿದರು.

ರೈತರ ಹಿತಾಸಕ್ತಿಗೆ ಪೂರಕವಾಗಿರುವ ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನಗೊಳ್ಳಬೇಕು ಎಂದು ಬೇಡಿಕೆಯನ್ನೂ ಅಣ್ಣಾ ಮುಂದಿಟ್ಟಿದ್ದಾರೆ.

Leave A Reply

Your email address will not be published.