ಲೋಕಸಭೆ ಜನಾದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ನಿರೀಕ್ಷೆಯಲ್ಲಿ ಗಡ್ಕರಿ: ಸಂಜಯ್ ರಾವತ್

7,991

ಮುಂಬೈ, ಜ.7: ದೇಶ ಅತಂತ್ರ ಜನಾದೇಶದತ್ತ ಸಾಗುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂತಹ ಸಂಭವನೀಯತೆಗಾಗಿ ಕಾಯುತ್ತಿದ್ದಾರೆ ಎಂದು ಬಿಜೆಪಿ ಮೈತ್ರಿಕೂಟ ಶಿವಸೇನೆಯ ಸಂಸದ ಸಂಜಯ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.

ಸೇನಾ ಮುಖವಾಣಿ ‘ಸಾಮ್ನಾ’ದ ಕಾರ್ಯನಿರ್ವಾಹಕ ಸಂಪಾದಕ ರಾವತ್ ದಿನಪತ್ರಿಕೆಯೊಂದರಲ್ಲಿ ಬರೆದ ರವಿವಾರದ ಅಂಕಣಬರಹದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುಗ್ಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವ ಮೋದಿಯಷ್ಟು ಬೆಳೆಯದಿದ್ದರೂ, ಈಗಿನ ಸರಕಾರದಿಂದ ನಿರಾಸೆಗೊಂಡಿರುವ ಜನರು ರಾಹುಲ್‌ಗೆ ಮಹತ್ವ ನೀಡುತ್ತಿದ್ದಾರೆ ಎಂದರು.

”ದೇಶ ಅತಂತ್ರ ಜನಾದೇಶದತ್ತ ಮುಖ ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇದಕ್ಕೆಲ್ಲಾ ಹೊಣೆಯಾಗಿದ್ದಾರೆ. 2014ರಲ್ಲಿ ಮೋದಿಗೆ ಲಭಿಸಿದ ಸಂಪೂರ್ಣ ಜನಾದೇಶ ವ್ಯರ್ಥವಾಗಿದೆ. 2014ರಲ್ಲಿ ಮೋದಿ ಅಲೆಯಿತ್ತು. ಮತದಾರರು ಕಾಂಗ್ರೆಸ್‌ನ್ನು ಸೋಲಿಸಲು ಬಿಜೆಪಿಗೆ ಬೆಂಬಲ ನೀಡಿದ್ದರು. ಆದರೆ, ಇದೀಗ ಚಿತ್ರಣ ಸಂಪೂರ್ಣ ಬದಲಾಗಿದೆ. ಬಿಜೆಪಿಯ ಹಿರಿಯ ನಾಯಕರು ಮುಂಬರುವ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಸಾಧ್ಯತೆ ಬಗ್ಗೆ ಚಿಂತಿತರಾಗಿದ್ದಾರೆ.

ನಿತಿನ್ ಗಡ್ಕರಿ ಹೇಳಿಕೆ ಇದಕ್ಕೆ ಸಾಕ್ಷಿ. ಗಡ್ಕರಿಯಂತಹ ನಾಯಕರು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಇತರ ನಾಯಕರಿಗೆ ಸಲ್ಲಬಹುದಾದ ವ್ಯಕ್ತಿ. 2009ರಿಂದ 2013ರ ತನಕ ಬಿಜೆಪಿ ಅಧ್ಯಕ್ಷರಾಗಿದ್ದ ಗಡ್ಕರಿಗೆ ಎರಡನೇ ಅವಧಿಗೆ ಅಧಿಕಾರ ವಿಸ್ತರಿಸದಿರಲು ರಾಜಕೀಯ ಪಿತೂರಿ ಕಾರಣ ಎಂದು ರಾವತ್ ಹೇಳಿದ್ದಾರೆ.

Leave A Reply

Your email address will not be published.