ನೆನಪಿರಲಿ, ಫೆ.3ರಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ

6,461

ರಾಜ್ಯದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಇದೇ ಫೆ.3 ರಂದು ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಅವರು ತಿಳಿಸಿದರು.

ಪೋಲಿಯೋ ಟಾಸ್ಕ್ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 7 ವರ್ಷಗಳಿಂದ ಇಲ್ಲಿಯವರೆಗೂ ಯಾವುದೇ ಪೊಲೀಯೋ ಪ್ರಕರಣ ಭಾರತದಲ್ಲಿ ದಾಖಲಾಗಿಲ್ಲ. ಕೊನೆಯ ಪ್ರಕರಣ 2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ದಾಖಲಾಗಿತ್ತು. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಫಾನಿಸ್ತಾನದಲ್ಲಿ ಪೋಲಿಯೋ ಪ್ರಕರಣ ಕಂಡು ಬಂದಿರುವುದರಿಂದ ಮುಂಜಗ್ರತಾ ಕ್ರಮವಾಗಿ ಲಸಿಕೆ ಹಾಕುವುದನ್ನು ಮುಂದುವರಿಸಲಾಗಿದೆ ಎಂದರು.

ಪ್ರತಿ ಶಿಶುವಿಗೆ 5 ವರಸೆ ಒಪಿವಿ ಮತ್ತು 2 ವರಸೆ ಐಪಿವಿ ಲಸಿಕೆಗಳನ್ನು ಸರ್ಕಾರದ ಲಸಿಕಾ ವೇಳಾಪಟ್ಟಿಯಂತೆ ನೀಡಲಾಗುತ್ತದೆ. ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತವಾಗದಂತೆ ಕ್ರಮ ವಹಿಸಲಾಗಿದೆ. ಅಂದಾಜು 66,77,323 ಮಕ್ಕಳಿಗೆ, 30,237 ಬೂತ್‍ಗಳಲ್ಲಿ, 60474 ತಂಡಗಳಲ್ಲಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದರಲ್ಲಿ 1,03,464 ಲಸಿಕಾ ಕಾರ್ಯಕರ್ತರು, 6047 ಮೇಲ್ವಿಚಾರಕರು, 1020 ಸಂಚಾರಿ ತಂಡ ಹಾಗೂ 1737 ಟ್ರಾನ್ಸಿಟ್ ತಂಡಗಳನ್ನು ನೇಮಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮವನ್ನು ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ವಾರ್ತಾ, ಕಾರ್ಮಿಕ, ಸಾರಿಗೆ ಹೀಗೆ ಹಲವು ಇಲಾಖೆಗಳ ಸಹಕಾರದೊಂದಿಗೆ ಈ ಲಸಿಕೆ ಕಾರ್ಯಕ್ರಮ ಯಶ್ವಸಿಗೊಳ್ಳಲಿದೆ.

ಫೆ. 3 ರಂದು ರಾಷ್ಟ್ರೀಯ ಲಸಿಕಾ ದಿನಾಚರಣೆ ಅಂಗವಾಗಿ ರಾಜದ್ಯಂತ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಂತರ ನಗರ ಪ್ರದೇಶದಲ್ಲಿ 2 ದಿವಸ ಹಾಗೂ ಗ್ರಾಮೀಣ ಪ್ರದೇಶದಲ್ಲಿ 3 ದಿವಸ ಮನೆ ಮನೆಗಳಿಗೆ ತೆರಳಿ ಲಸಿಕೆ ಹಾಕಲಾಗುವುದು ಎಂದರು. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಾರ್ತಾ ಇಲಾಖೆ ಕಾರ್ಯದರ್ಶಿಗಳಾದ ಪಂಕಜ್ ಕುಮಾರ್ ಪಾಂಡೆ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.