ಸುದ್ದಿಗೋಷ್ಠಿ ನಡೆಸಿ: ಮೋದಿಗೆ ಶತ್ರುಘ್ನ ಸಿನ್ಹಾ ಸವಾಲು

3,637

ಹೊಸದಿಲ್ಲಿ, ಜ.4: ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದ ಮೊದಲ ದಿನ ಎಎನ್‌ಐಗೆ ನೀಡಿದ ಸಂದರ್ಶನವನ್ನು “ಪೂರ್ವನಿಯೋಜಿತ, ಸಾಕಷ್ಟು ಪೂರ್ವ ತಯಾರಿ ನಡೆಸಿಕೊಂಡ ಮತ್ತು ರಿಹರ್ಸಲ್ ಮಾಡಿದ ಸಂದರ್ಶನ” ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಲೇವಡಿ ಮಾಡಿದ್ದಾರೆ. ಜತೆಗೆ ಈ ಹಿಂದಿನ ಪ್ರಧಾನಿಗಳಂತೆ ಪತ್ರಿಕಾಗೋಷ್ಠಿ ನಡೆಸಿ, ಪೂರ್ವನಿರ್ಧರಿತವಲ್ಲದ ಪ್ರಶ್ನೆಗಳನ್ನು ಎದುರಿಸಿ” ಎಂದು ಸವಾಲು ಹಾಕಿದ್ದಾರೆ.

“ಮಾನ್ಯರೇ ನಿಮ್ಮ ಉತ್ತಮವಾಗಿ ಬರೆದ, ಕೊರಿಯೊಗ್ರಾಫ್ ಮಾಡಿದ, ಪೂರ್ವನಿರ್ಧರಿತ ಪ್ರಶ್ನೆಗಳ, ರಿಹರ್ಸಲ್ ಮಾಡಿದ ಟಿವಿ ಸಂದರ್ಶನವನ್ನು ಸೋಮವಾರ ಸಂಜೆ ನೋಡಿದ್ದೇವೆ. ನಿರೂಪಕಿ ಅದ್ಭುತ ಮಹಿಳೆ ಸ್ಮಿತಾ ಪ್ರಕಾಶ್ ಬಗ್ಗೆ ಗೌರವಪೂರ್ವಕ ಮಾತುಗಳನ್ನಾಡುತ್ತಾ, ಪತ್ರಿಕಾಗೋಷ್ಠಿಯಲ್ಲಿ ಪೂರ್ವನಿರ್ಧರಿತವಲ್ಲದ ಪ್ರಶ್ನೆಗಳನ್ನು ಎದುರಿಸುವ ಮೂಲಕ ಸಮರ್ಥ ಹಾಗೂ ಬುದ್ಧಿವಂತ ಪ್ರಧಾನಿ ಎನಿಸಿಕೊಳ್ಳಲು ಇದೀಗ ಸುಸಂದರ್ಭ” ಎಂದು ಸರಣಿ ಟ್ವೀಟ್‌ಗಳಲ್ಲಿ ಲೇವಡಿ ಮಾಡಿದ್ದಾರೆ.

“ನೀವು ಅವರನ್ನು ಎದುರಿಸಲು ಬಯಸುವುದಿಲ್ಲ ಎನ್ನುವುದು ಗೊತ್ತು; ಆದರೆ ಕನಿಷ್ಠಪಕ್ಷ ಮುತ್ಸದ್ದಿ ರಾಜತಾಂತ್ರಿಕ ಯಶವಂತ್ ಸಿನ್ಹಾ, ಅನುಭವಿ ಪತ್ರಕರ್ತ ಅರುಣ್ ಶೌರಿ ಅವರಂಥ ವ್ಯಕ್ತಿಗಳ ಪ್ರಶ್ನೆಗಳಿಗಾದರೂ ಉತ್ತರಿಸುವ ಧೈರ್ಯ ತೋರಿಸಿ” ಎಂದು ಚುಚ್ಚಿದ್ದಾರೆ.

ಮೋದಿಯವರು ಸಂದರ್ಶನದಲ್ಲಿ ತೀರಾ ಸ್ಥಿತಪ್ರಜ್ಞನಂತೆ ಕಂಡುಬಂದರೂ, ಹಿಂದಿನ ಪ್ರದರ್ಶನಗಳಿಗೆ ಹೋಲಿಸಿದರೆ ಅಷ್ಟೊಂದು ಮನಸೆಳೆಯುವಂತಿರಲಿಲ್ಲ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

Leave A Reply

Your email address will not be published.