ಅಯ್ಯಪ್ಪನ ಸನ್ನಿಧಿಗೆ ಮತ್ತೊಬ್ಬ ಮಹಿಳೆ ಎಂಟ್ರಿ, ಹೊತ್ತಿ ಉರಿಯುತ್ತಿದೆ ಕೇರಳ..!

5,527

ತಿರುವನಂತಪುರಂ,ಜ.4- ಋತುಸ್ರಾವ ವಯೋಮಾನದ ಇಬ್ಬರು ಮಹಿಳೆಯರು ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಭೇಟಿ ನೀಡಿದ ನಂತರ ಕೇರಳ ಹೊತ್ತಿ ಉರಿಯುತ್ತಿರುವ ಬೆನ್ನಲ್ಲೇ ಮತ್ತೋರ್ವ ಮಹಿಳೆ ಭೇಟಿ ನೀಡಿರುವುದು ಬೆಳಕಿಗೆ ಬಂದಿದೆ.ಶ್ರೀಲಂಕಾದ ಮಹಿಳೆ ಶಶಿಕಲಾ ಎಂಬುವರು ನಿನ್ನೆ ರಾತ್ರಿ 10.55ಕ್ಕೆ ಶಬರಿಮಲೆ ದೇವಸ್ಥಾನದಲ್ಲಿ ದರ್ಶನ ಪಡೆದಿರುವುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ದೇವಸ್ಥಾನದ ಬಾಗಿಲು ಮುಚ್ಚಲು ಕೇವಲ 5 ನಿಮಿಷ ಬಾಕಿ ಇರುವಾಗ ತಮಿಳು ಮೂಲದ ಶಶಿಕಲಾ ತಮ್ಮ ಪತಿ ಜೊತೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ 42 ವರ್ಷದ ಬಿಂದು, 44 ವರ್ಷದ ಕನಕದುರ್ಗ ಎಂಬ ಮಹಿಳೆಯರು ಶಬರಿಮಲೆಗೆ ಭೇಟಿ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದೀಗ ಶಶಿಕಲಾ ಕೂಡ ಪರ್ಯಾಯ ಮಾರ್ಗದಲ್ಲಿ ದೇವಸ್ಥಾನಕ್ಕೆ ತೆರಳಿ ದಾಖಲೆ ನಿರ್ಮಿಸಿದ್ದಾರೆ.

ಶಬರಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣ ಶಶಿಕಲಾ ಮತ್ತು ಅವರ ಪತಿಗೆ ಪೊಲೀಸರೇ ಭದ್ರತೆ ನೀಡಿದ್ದರು. ಡಿಎಸ್‍ಪಿ ನೇತೃತ್ವದಲ್ಲಿ ಪೊಲೀಸ್ ತಂಡವೊಂದು ಮರಕೊಟ್ಟಂ ತನಕವೂ ಭದ್ರತೆಯನ್ನು ಒದಗಿಸಿತು. ಇಲ್ಲಿ ಪ್ರತಿಭಟನೆ ನಡೆಯುತ್ತಿದ್ದರಿಂದ ಇವರ ಮೇಲೆ ಯಾರೊಬ್ಬರಿಗೂ ಹೆಚ್ಚಿನ ನಿಗಾವಹಿಸಲು ಸಾಧ್ಯವಾಗಲಿಲ್ಲ.

ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಸ್ವಾಮಿಯ ದರ್ಶನ ಪಡೆದು ಅವರು ಸುರಕ್ಷಿತವಾಗಿ ಹಿಂತಿರುಗಿದರು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶ ಮಾಡಿದ ನಂತರ ಕೇರಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಶಬರಿಮಲೆ ಕರ್ಮ ಸಮಿತಿ ಎಂಬ ಸಂಘಟನೆ ನೇತೃತ್ವದಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಈಗಾಗಲೇ ಓರ್ವ ಬಿಜೆಪಿ ಕಾರ್ಯಕರ್ತ ಚಾಕು ಇರಿತದಿಂದ ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದಾರೆ.

Leave A Reply

Your email address will not be published.