ಹರಪನಹಳ್ಳಿಯನ್ನು ಬಳ್ಳಾರಿಗೆ ಸೇರಿಸಲು ಅಂತಿಮ ಅಧಿಸೂಚನೆ ಪ್ರಕಟ

5,979

ದಾವಣಗೆರೆ, ಡಿಸೆಂಬರ್ 27 : ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ಪುನಃ ಬಳ್ಳಾರಿಗೆ ಸೇರಿಸಲಾಗಿದೆ. ಕರ್ನಾಟಕ ಸರ್ಕಾರ ಡಿ.24ರಂದು ಈ ಕುರಿತು ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.

ಹರಪನಹಳ್ಳಿ ತಾಲೂಕಿಗೆ ಸಂಬಂಧಿಸಿದಂತಹ ಪ್ರಕರಣ/ಕಡತಗಳನ್ನು ಬಳ್ಳಾರಿ ಜಿಲ್ಲೆಗೆ ವರ್ಗಾವಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಸಿ.ಪುಟ್ಟನಂಜಯ್ಯ ಆದೇಶದಲ್ಲಿ ಸೂಚಿಸಿದ್ದಾರೆ.

ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರ್ಪಡೆ : ಕಂದಾಯ ಇಲಾಖೆ

1997ರಲ್ಲಿ ಹೊಸದಾಗಿ ದಾವಣಗೆರೆ ರಚನೆಗೊಂಡಾಗ ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರಿಸಲಾಗಿತ್ತು. ಆದರೆ, ಬಳ್ಳಾರಿಗೆ ಹೈದರಾಬಾದ್-ಕರ್ನಾಟಕ (371 ಜೆ) ಸವಲತ್ತು ಸಿಕ್ಕ ನಂತರ ಹರಪನಹಳ್ಳಿ ತಾಲೂಕಿನ ಜನರು ನಮಗೂ 371 ಜೆ ಸೌಲಭ್ಯ ಸಿಗಬೇಕು ಎಂದು ಹೋರಾಟ ಆರಂಭಿಸಿದ್ದರು.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹರಪನಹಳ್ಳಿ ಶಾಸಕ ಎಂ.ಪಿ.ರವೀಂದ್ರ ಅವರು ತಾಲೂಕನ್ನು ಬಳ್ಳಾರಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದರು. ಸರ್ಕಾರ ಒಪ್ಪದಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು.

ತಂದೆ ಕಾಲದಲ್ಲಿ ದಾವಣಗೆರೆಗೆ, ಮಗನ ಆಡಳಿತದಲ್ಲಿ ಬಳ್ಳಾರಿ ಜಿಲ್ಲೆಗೆ

ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹರಪನಹಳ್ಳಿಯನ್ನು ಪುನಃ ಬಳ್ಳಾರಿಗೆ ಸೇರಿಸುವ ಅಧಿಸೂಚನೆ ಹೊರಡಿಸಿದ್ದರು. ಆಗ ಆರಂಭವಾಗಿದ್ದ ಪುನರ್ ಸೇರ್ಪಡೆ ಪ್ರಕ್ರಿಯೆ ಈಗ ಮುಕ್ತಾಯಗೊಂಡಿದೆ. ಕಂದಾಯ ಇಲಾಖೆಯ ದಾಖಲೆಯನ್ನು ವರ್ಗಾವಣೆ ಮಾಡಿದ ನಂತರ ಒಂದೊಂದಾಗಿ ವರ್ಗಾವಣೆ ಮಾಡುತ್ತಾ ಬರಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ 11 ತಾಲೂಕುಗಳು : ಹರಪನಹಳ್ಳಿ ತಾಲೂಕು ಬಳ್ಳಾರಿಗೆ ಸೇರ್ಪಡೆ ಆಗಿದ್ದರಿಂದ ಈಗ ಜಿಲ್ಲೆಯಲ್ಲಿ 11 ತಾಲೂಕುಗಳಾಗಿವೆ. ಆಡಳಿತದ ದೃಷ್ಟಿಯಿಂದ ಮೂರು ಉಪ ವಿಭಾಗ ರಚನೆ ಮಾಡಲಾಗಿದೆ.

ಹರಪನಹಳ್ಳಿ ಉಪ ವಿಭಾಗದ ವ್ಯಾಪ್ತಿಗೆ ಹರಪನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ತಾಲೂಕುಗಳು ಸೇರುತ್ತವೆ. ಹೊಸಪೇಟೆ ಉಪ ವಿಭಾಗಕ್ಕೆ ಹೊಸಪೇಟೆ, ಕೂಡ್ಲಗಿ, ಕಂಪ್ಲಿ ತಾಲೂಕುಗಳು, ಬಳ್ಳಾರಿ ವಿಭಾಗಕ್ಕೆ ಬಳ್ಳಾರಿ, ಸಿರಗುಪ್ಪ,ಸಂಡೂರು, ಕುರಗೋಡು ಸೇರಿಸಲಾಗಿದೆ.

Leave A Reply

Your email address will not be published.