ದೆಹಲಿ ತಲುಪಿದ ಖಾತೆ ಹಂಚಿಕೆ ಚಂಡು

1,222

ಬೆಂಗಳೂರು, ಡಿ.26- ಎಂಟು ಮಂದಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂದು ಹೇಳುವ ಮೂಲಕ ಇತರೆ ಸಚಿವರ ಖಾತೆ ಬದಲಾವಣೆ ವದಂತಿಗಳನ್ನು ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಳ್ಳಿಹಾಕಿದ್ದಾರೆ.

ಇಂದು ಬೆಳಗ್ಗೆ ನಗರದ ಖಾಸಗಿ ಹೋಟೆಲ್‍ನಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಕೆಲ ಕಾಲ ಸಭೆ ನಡೆಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಖಾತೆ ಹಂಚಿಕೆ ಸಂಬಂಧವಾಗಿ ಚರ್ಚೆ ನಡೆಸಲಾಗಿದೆ. ಎಲ್ಲರ ಅಭಿಪ್ರಾಯ ಪಡೆಯಲಾಗಿದೆ. ಅದನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಕಳುಹಿಸಲಾಗಿದೆ. ಅವರು ಒಪ್ಪಿಗೆ ಸೂಚಿಸಿದ ಬಳಿಕ ಖಾತೆ ಹಂಚಿಕೆಯಾಗಲಿದೆ ಎಂದು ಹೇಳಿದರು. ಇಂದು ನಡೆದ ಸಭೆಯಲ್ಲಿ ನೂತನ ಸಚಿವರ ಖಾತೆ ಹಂಚಿಕೆ ಬಗ್ಗೆ ಚರ್ಚಿಸಲಾಗಿದೆ ಎಂದ ಅವರು, ಈಗಾಗಲೇ ಸಚಿವರಾಗಿರುವವರ ಖಾತೆ ಬದಲಾವಣೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

ಕಾಂಗ್ರೆಸ್ ಮನೆ ಸುಭದ್ರವಾಗಿದೆ. ರಾಮಲಿಂಗಾರೆಡ್ಡಿ, ರಮೇಶ್‍ಜಾರಕಿಹೊಳಿ ಯಾರೂ ಕೂಡ ಪಕ್ಷ ಬಿಡುವುದಿಲ್ಲ. ರಮೇಶ್‍ಜಾರಕಿಹೊಳಿ ಪಕ್ಷದ ದೊಡ್ಡ ನಾಯಕರು. ರಾಮಲಿಂಗಾರೆಡ್ಡಿ ಅವರು ಸಿದ್ದರಾಮಯ್ಯ ಹಾಗೂ ನನ್ನನ್ನು ಭೇಟಿ ಮಾಡಿದ್ದಾರೆ. ಅವರು ಬೆಂಗಳೂರಿಗೆ ದೊಡ್ಡ ನಾಯಕರು. ನಮ್ಮಲಿ ಯಾವುದೇ ಅಸಮಾಧಾನಗಳಿಲ್ಲ. ಎಲ್ಲವೂ ಸರಿಯಿದೆ ಎಂದು ಸ್ಪಷ್ಟಪಡಿಸಿದರು.

Leave A Reply

Your email address will not be published.