ಜನರು ನನ್ನನ್ನು ಮರೆತುಬಿಟ್ಟರೆಂದು ಬೇಸರ ಮಾಡಿಕೊಂಡ ಮಾಜಿ ಪ್ರಧಾನಿ ದೇವೇಗೌಡ

2,266

ಬೆಂಗಳೂರು, ಡಿಸೆಂಬರ್ 26: “ಕಾಶ್ಮೀರಕ್ಕೆ ರೈಲು ಮಾರ್ಗ, ದೆಹಲಿ ಮೆಟ್ರೋ, ಬೊಗಿಬೀಲ್ ರೈಲುರಸ್ತೆ ಸೇತುವೆ ನಾನು (ಪ್ರಧಾನಮಂತ್ರಿಯಾಗಿ) 1997-98ರಲ್ಲಿ ಮಂಜೂರು ಮಾಡಿದ ಯೋಜನೆಗಳ ಪೈಕಿ ಕೆಲವು. ಪ್ರತಿ ಯೋಜನೆಗೆ ಬಜೆಟ್ ನಲ್ಲಿ 100 ಕೋಟಿ ರುಪಾಯಿ ಎತ್ತಿಟ್ಟಿದ್ದೆ. ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದೆ. ಜನರು ನನ್ನ ಇಂದು ಮರೆತುಬಿಟ್ಟರು” ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೇಸರಿಸಿಕೊಂಡಿದ್ದಾರೆ.

“ಅಯ್ಯೋ ರಾಮಾ! ನನ್ನನ್ನು ಯಾರು ನೆನಪಿಸಿಕೊಳ್ಳುತ್ತಾರೆ? ಕೆಲ ಪತ್ರಿಕೆಗಳು ಆ ಬಗ್ಗೆ ಬರೆದವು ಅಷ್ಟೇ” ಎಂದು ಮಾಧ್ಯಮಗಳಿಗೆ ಉತ್ತರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾರತದ ಅತಿ ದೊಡ್ಡ ರೈಲುರಸ್ತೆ ಸೇತುವೆಯನ್ನು ಉದ್ಘಾಟಿಸಿದರು. ಅದಕ್ಕೆ ಶಂಕುಸ್ಥಾಪನೆ ಮಾಡಿದ್ದವರು ದೇವೇಗೌಡ. ಆದ್ದರಿಂದ ಅವರಿಗೆ ಆಹ್ವಾನ ನೀಡಲಾಗಿತ್ತೆ ಎಂಬ ಪ್ರಶ್ನೆಗೆ ಬೇಸರದಿಂದ ಅವರು ಉತ್ತರಿಸಿದ್ದು ಹೀಗೆ.

ಬೋಗಿಬಿಲ್ ಸೇತುವೆ ಉದ್ಘಾಟನೆ : ಮೋದಿ ವಿರುದ್ಧ ಗೌಡರ ಗುಡುಗು

ಯೋಜನೆಗಳು ಬಹಳ ತಡವಾಗಿ ಜಾರಿ ಆಗುತ್ತವಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಗೌಡರು, ಅಲ್ಲೇ ಇತರರಿಗೂ ನನಗೂ ಇರುವ ವ್ಯತ್ಯಾಸ. ಹಾಸನ-ಮೈಸೂರು ಯೋಜನೆಯನ್ನು ನಾನು ಹದಿಮೂರು ತಿಂಗಳಲ್ಲಿ ಪೂರ್ಣಗೊಳಿಸಿದೆ. ಎರಡು ಸೇತುವೆ ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ತಿ ಮಾಡಿದೆ. ಘಟಪ್ರಭಾಗೆ ನಿರ್ಮಿಸಿದ ಅಂಗವಾಡಿ. ಹೋಗಿ, ಕೃಷ್ಣಾ ನದಿಗೆ ನಿರ್ಮಿಸಿದ ಸೇತುವೆ ನೋಡಿ ಎಂದಿದ್ದಾರೆ.

ಬಾಂಬೆ-ಕರ್ನಾಟಕ ಭಾಗದಿಂದ ಬಂದವರು ಉತ್ತರ ಕರ್ನಾಟಕಕ್ಕೆ ದೇವೇಗೌಡರು ಏನೂ ಮಾಡಿಲ್ಲ ಎನ್ನುತ್ತಾರೆ. ಹೋಗಿ, ಆ ಯೋಜನೆಗಳು ನೋಡಿ ಎಂದು ಹೇಳಿದ್ದಾರೆ. ನನ್ನ ಅವಧಿಯಲ್ಲೇ ಹಲವಾರು ಯೋಜನೆಗಳನ್ನು ಆರಂಭಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.

ಜನ ಇಂದು ಅಹಂ ಮುಕ್ತ ಭಾರತ ಮಾಡಿದ್ದಾರೆ: ದೇವೇಗೌಡರ ಪ್ರತಿಕ್ರಿಯೆ

ಬೊಗಿಬೀಲ್ ಸೇತುವೆಯನ್ನು ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾಗಿದೆ. ಅಸ್ಸಾಂ ಹಾಗೂ ಅರುಣಾಚಲಪ್ರದೇಶದ ಮಧ್ಯೆ ಸಂಪರ್ಕ ಸೇತುವಾದ 4.9 ಕಿ.ಮೀ. ಉದ್ದದ ಈ ಸೇತುವೆಗೆ 5900 ಕೋಟಿ ವೆಚ್ಚವಾಗಿದೆ. ಈ ಯೋಜನೆಗೆ ಜನವರಿ 22,1997ರಂದು ಆಗಿನ ಪ್ರಧಾನಿ ದೇವೇಗೌಡರು ಚಾಲನೆ ನೀಡಿದ್ದರು. ಆ ಯೋಜನೆ ಲೋಕಾರ್ಪಣೆಗೆ ದೇವೇಗೌಡರಿಗೆ ಆಹ್ವಾನ ನೀಡದಿರುವುದು ಬೇಸರಕ್ಕೆ ಕಾರಣವಾಗಿದೆ.

Leave A Reply

Your email address will not be published.