ಏಕಾಏಕಿ ಚೌಕಾಶಿ ಮಾಡುವ ಶಕ್ತಿ ಪಡೆದ ಬಿಜೆಪಿ ಮಿತ್ರಪಕ್ಷಗಳು!

6,642

ಹೊಸದಿಲ್ಲಿ, ಡಿ.24: ಬಿಜೆಪಿ ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಸೋತ ಹಿನ್ನೆಲೆಯಲ್ಲಿ ಆ ಪಕ್ಷದ ಮಿತ್ರಪಕ್ಷಗಳು ಏಕಾಏಕಿ ಚೌಕಾಶಿ ಮಾಡುವ ಶಕ್ತಿ ಪಡೆದುಕೊಂಡಿವೆ.

ರವಿವಾರ ಬಿಹಾರ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಎನ್‌ಡಿಎ ಸೀಟು ಹಂಚಿಕೆ ಸೂತ್ರದಲ್ಲಿ ಈ ಅಂಶ ಪ್ರತಿಫಲಿಸಿದೆ. ಎಲ್‌ಜೆಪಿ ಪಕ್ಷದ ರಾಮ್‌ವಿಲಾಸ್ ಪಾಸ್ವಾನ್ ರಾಜ್ಯಸಭಾ ಸದಸ್ಯತ್ವ, 6 ಲೋಕಸಭಾ ಕ್ಷೇತ್ರಗಳನ್ನು ಗಿಟ್ಟಿಸಿಕೊಳ್ಳಲು ಸಫಲವಾಗಿದ್ದಾರೆ.

ಮತ್ತೊಂದೆಡೆ ಬಿಜೆಪಿ ತನ್ನ ಐವರು ಹಾಲಿ ಸಂಸದರನ್ನು ಸ್ಪರ್ಧೆಯಿಂದ ಹೊರಗಿಡಬೇಕಾದ ಸ್ಥಿತಿಯಲ್ಲಿದೆ. ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 22 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಈ ಬಾರಿ ಕೇವಲ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. 17 ಕ್ಷೇತ್ರಗಳಲ್ಲಿ ಜೆಡಿಯು ಸ್ಪರ್ಧಿಸಲಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಎದುರಾಳಿಗಳಾಗಿ ಸ್ಪರ್ಧಿಸಿದ್ದವು.

ಸೀಟು ಹಂಚಿಕೆ ಸೂತ್ರದಲ್ಲಿ ಪಾಸ್ವಾನ್ ಹೆಚ್ಚು ಲಾಭ ಪಡೆದಿದ್ದಾರೆ. ಪಾಸ್ವಾನ್ ಮೊದಲಿಗೆ 4 ಲೋಕಸಭಾ ಕ್ಷೇತ್ರ ಹಾಗೂ ಒಂದು ರಾಜ್ಯಸಭಾ ಸದಸ್ಯತ್ವಕ್ಕೆ ಒಪ್ಪಿಕೊಂಡಿದ್ದರು. ಉಪೇಂದ್ರ ಕುಶ್ವಾಹ ಎನ್‌ಡಿಎ ಮೈತ್ರಿಕೂಟ ತ್ಯಜಿಸಿದ ಹಿನ್ನೆಲೆಯಲ್ಲಿ ಪಾಸ್ವಾನ್ ಬಿಜೆಪಿ-ಜೆಡಿಯುನೊಂದಿಗೆ ಚೌಕಾಶಿಗೆ ಇಳಿದರು. ಕುಶ್ವಾಹ ನೇತೃತ್ವದ ಪಕ್ಷ 2014ರಲ್ಲಿ 3 ಕ್ಷೇತ್ರಗಳಲ್ಲಿ ಜಯಶಾಲಿಯಾಗಿತ್ತು.

“ನೋಟು ನಿಷೇಧವಾಗಿ ಎರಡು ವರ್ಷ ಕಳೆದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶಿಸುವ ಮೂಲಕ ನಿತೀಶ್‌ಕುಮಾರ್ ಹಾಗೂ ಪಾಸ್ವಾನ್ ಲಾಭ ಮಾಡಿಕೊಂಡಿದ್ದಾರೆ. ಬಿಜೆಪಿ ತನ್ನ ಕೈಯನ್ನು ತಿರುಚಿಸಿಕೊಂಡಿದೆ’ ಎಂದು ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.

Leave A Reply

Your email address will not be published.