ಪರಾರಿಯಾಗಿರುವ 58 ದೇಶಭ್ರಷ್ಟರನ್ನು ಕರೆತರಲ್ಲೂ ಕೇಂದ್ರದ ಟೀಮ್ ರೆಡಿ

3,054

ಡಿ.20-ವಿವಿಧ ಬ್ಯಾಂಕುಗಳಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ವಿವಿಧ ದೇಶಗಳಿಗೆ ಪರಾರಿಯಾಗಿರುವ 58 ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಕರೆತಂದು ಶಿಕ್ಷೆಗೆ ಗುರಿಪಡಿಸುವ ಯತ್ನವನ್ನು ಕೇಂದ್ರ ಸರ್ಕಾರ ಮತ್ತಷ್ಟು ತೀವ್ರಗೊಳಿಸಿದೆ. ಮದ್ಯದ ದೊರೆ ವಿಜಯ್ ಮಲ್ಯ, ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಲ್ಲದೇ ಇದೇ ರೀತಿಯ ಭಾರೀ ವಂಚನೆ ಮತ್ತು ಆರ್ಥಿಕ ಅಪರಾಧಗಳನ್ನು ಎಸಗಿ ರಾತ್ರೋರಾತ್ರಿ ವಿದೇಶಗಳಿಗೆ ಹಾರಿ ಅಲ್ಲಿ ಆಶ್ರಯ ಪಡೆದಿರುವ ದೇಶಭ್ರಷ್ಟ ಕಳಂಕಿತರನ್ನು ಹಸ್ತಾಂತರಕ್ಕೆ ಪಡೆದು ಅವರನ್ನು ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸುವ ತೀವ್ರ ಯತ್ನದಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ಡಿಆರ್‍ಐ ಮತ್ತಿತರ ಸಂಸ್ಥೆಗಳು ಕಾರ್ಯ ಪ್ರವೃತ್ತವಾಗಿದ್ದು, ಅಂತಾರಾಷ್ಟ್ರೀಯ ಪೊಲೀಸ್(ಇಂಟರ್‍ಪೊಲ್), ಸಂಬಂಧಪಟ್ಟ ದೇಶಗಳ ತನಿಖಾ ಸಂಸ್ಥೆಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉನ್ನತಾಧಿಕಾರಿಗಳ ಸಂಪರ್ಕದಲ್ಲಿವೆ 
ಭಾರತಕ್ಕೆ ಅಗತ್ಯವಾಗಿ ಬೇಕಾಗಿರುವ 58 ದೇಶಭ್ರಷ್ಟ ಆರ್ಥಿಕ ಅಪರಾಧಿಗಳಲ್ಲಿ ಕನಿಷ್ಟ 16 ಮಂದಿಯನ್ನು ತ್ವರಿತವಾಗಿ ಹಸ್ತಾಂತರಕ್ಕೆ ಪಡೆಯಲು ಕೇಂದ್ರ ಸರ್ಕಾರ ಈಗ ಮುಂದಾಗಿದೆ ಈ ಸಂಬಂಧ ಯುಎಇ, ಯನೈಟೆಡ್ ಕಿಂಗ್‍ಡಮ್, ಬೆಲ್ಜಿಯಂ, ಈಜಿಪ್ಟ್, ಅಮೆರಿಕ ಹಾಗೂ ಅಂಟಿಗುವಾ ಮತ್ತು ಬಾರ್ಬುಡಾ ದೇಶಗಳೊಂದಿಗೆ ಕೇಂದ್ರ ಸರ್ಕಾರ ನಿರಂತರ ಸಂಪರ್ಕ ಸಾಧಿಸಿದ್ದು, ಅಪರಾಧಿಗಳನ್ನು ಅಲ್ಲಿಂದ ಗಡಿಪಾರು ಮಾಡುವಂತೆ ಒತ್ತಡ ಹೇರುತ್ತಿದೆ. ಅಲ್ಲದೇ ಇಂಟರ್‍ಪೊಲ್ ಮೂಲಕ ರೆಡ್ ಕಾರ್ನರ್ ನೋಟಿಸ್. ಲುಕ್ ಔಟ್ ಸಕ್ರ್ಯೂಲರ್ ಮತ್ತು ಹಸ್ತಾಂತರಕ್ಕಾಗಿ ಮನವಿಗಳನ್ನು ಸಲ್ಲಿಸಿ ಮುಂದಿನ ಕ್ರಮಗಳಿಗೆ ಸಿದ್ದತೆ ನಡೆಸುತ್ತಿದೆ. 9,000 ಕೋಟಿ ರೂ.ಗಳನ್ನು ವಂಚಿಸಿ ಇಂಗ್ಲೆಂಡ್‍ಗೆ ಪರಾರಿಯಾಗಿರುವ ಕಳಂಕಿತ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಲಂಡನ್‍ನ ನ್ಯಾಯಾಲಯವೊಂದು ತೀರ್ಪು ನೀಡಿದೆ. ಇದರಿಂದ ಉತ್ತೇಜನ ಪಡೆದಿರುವ ಕೇಂದ್ರ ಸರ್ಕಾರ ಇತರ ಆರ್ಥಿಕ ಅಪರಾಧಿಗಳನ್ನೂ ವಿವಿಧ ದೇಶಗಳಿಂದ ಗಡಿಪಾರು ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.

ನೀರವ್ ಮೋದಿ, ಮೆಹುಲ್ ಚೋಕ್ಸಿ, ನಿತೀನ್ ಮತ್ತು ಚೇತನ್ ಸಂದೇಸರ, ಲಲಿತ್ ಮೋದಿ ಹಾಗೂ ಯುರೋಪ್‍ನ ಮಧ್ಯವರ್ತಿಗಳಾದ ಗೈಡೋ ರಾಲ್ಫ್ ಹ್ಯಾಶ್‍ಚ್ಕೆ ಮತ್ತು ಕಾರ್ಲೋ ಗೆರೋಸಾ ಮೊದಲಾದ ಅಪರಾಧಿಗಳನ್ನು ಹಸ್ತಾಂತರಕ್ಕೆ ಪಡೆಯುವ ಪ್ರಯತ್ನ ಮುಂದುವರಿಸಿದೆ.
ವಿದೇಶಾಂಗ ವ್ಯವಹಾರ ಸಚಿವಾಲಯವು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂಥ ಅಪರಾಧಿಗಳನ್ನು ದೇಶಕ್ಕೆ ಅಗತ್ಯವಾಗಿ ಕರೆತರಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯೋನ್ಮುಖವಾಗಿದೆ.

ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಕೋಟ್ಯಂತರ ರೂ.ಗಳ ಸಾಲ ಎತ್ತುವಳಿ ಮಾಡಿ ಉದ್ದೇಶಿತ ಸುಸ್ತಿದಾರರಾಗಿ ವಿದೇಶಕ್ಕೆ ಹಾರಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಹೊಸದಾಗಿ ಕಾನೂನು ಜಾರಿಗೊಳಿಸಿದೆ. ತಪ್ಪಿತಸ್ಥರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದೂ ಸೇರಿದಂತೆ ಅನೇಕ ಪರಿಣಾಮಕಾರಿ ಕ್ರಮಗಳನ್ನು ಈ ಮೂಲಕ ಕೈಗೊಳ್ಳಲಾಗುತ್ತಿದೆ.

Leave A Reply

Your email address will not be published.