ನಾಳೆಯಿಂದ ಐದು ದಿನ ಬ್ಯಾಂಕ್‌ ರಜೆ! ಹಣ ಬೇಕಿದ್ದರೆ ಇಂದೇ ಎತ್ತಿಟ್ಕೊಳ್ಳಿ

8,674

ನಾಳೆಯಿಂದ ಐದು ದಿನಗಳ ಕಾಲ ಬ್ಯಾಂಕ್‌ಗಳು ಬಾಗಿಲು ಮುಚ್ಚಲಿವೆ. ಇದರಿಂದ ಎಟಿಎಂಗಳು ಹಣದ ಕೊರತೆ ಎದುರಿಸುವ ಸಾಧ್ಯತೆ ಇದ್ದು, ಎದುರಾಗಬಹುದಾದ ಹಣಕಾಸಿನ ತೊಂದರೆಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಬ್ಯಾಂಕ್‌ನ ವ್ಯವಹಾರಗಳ ದಿನವನ್ನು ಬದಲಿಸಿಕೊಳ್ಳುವ ಹಾಗೂ ಅಗತ್ಯ ಹಣವನ್ನು ತೆಗೆದಿಟ್ಟುಕೊಳ್ಳಬೇಕಾಗುತ್ತದೆ.

ಡಿ.21ರಿಂದ 26ರ ನಡುವೆ ಐದು ದಿನ ಈ ವ್ಯತ್ಯಯವಾಗಲಿದೆ. ಸತತ ರಜೆಯ ನಡುವೆ 24ರ ಸೋಮವಾರದಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ.

ಡಿ.26ರಂದು ಬ್ಯಾಂಕ್‌ ಒಕ್ಕೂಟ(ಯುಎಫ್‌ಬಿಯು) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆಕೊಟ್ಟಿದೆ. ಆದರೆ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ(ಎಐಬಿಒಸಿ) ಪ್ರತ್ಯೇಕವಾಗಿ ಡಿ.21ರಂದು ಮತ್ತೊಂದು ಮುಷ್ಕರಕ್ಕೆ ಕರೆ ಕೊಟ್ಟಿದೆ. ಇದರಿಂದಾಗಿ ಐದು ದಿನ ಕಾಲ ಬ್ಯಾಂಕ್‌ ವಹಿವಾಟು ನಡೆಯದು ಎಂದು ವರದಿಯಾಗಿದೆ.

ದಿನ 1: ಡಿ.21ರಂದು ಶುಕ್ರವಾರ ಬ್ಯಾಂಕ್‌ ನೌಕರರ ಒಕ್ಕೂಟದಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ

ದಿನ 2: ಡಿ.22ರಂದು ನಾಲ್ಕನೇ ಶನಿವಾರ ಬ್ಯಾಂಕ್‌ ರಜೆ

ದಿನ 3: ಡಿ.23ರಂದು ಭಾನುವಾರ ಸರ್ಕಾರಿ ರಜೆ

ದಿನ 4: ಡಿ.25ರಂದು ಮಂಗಳವಾರ ಕ್ರಿಸ್ಮಸ್‌ ರಜೆ

ದಿನ 5: ಡಿ.26ರಂದು ಬುಧವಾರ ಬ್ಯಾಂಕ್‌ ಒಕ್ಕೂಟದಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ

ಡಿ.24ರಂದು ಸೋಮವಾರ ಕ್ರಿಸ್ಮಸ್‌ ಹಿಂದಿನ ದಿನ ಯಾವುದೇ ರಜೆ ಇಲ್ಲ. ಈ ದಿನವನ್ನು ಬಿಟ್ಟು ಉಳಿದಂತೆ ಐದು ದಿನ ಬ್ಯಾಂಕ್‌ಗಳು ಬಾಗಿಲು ಮುಚ್ಚಲಿವೆ. ಸೋಮವಾರ ಮಾತ್ರ ಕಾರ್ಯನಿರ್ವಹಣೆ ಇದ್ದು, ಅಂದು ಸಿಬ್ಬಂದಿ ರಜೆ ತೆರಳಿದರೆ ಅಂದೂ ಕೂಡಾ ಬ್ಯಾಂಕ್‌ನ ವಹಿವಾಟು ನಡೆಯುವುದು ಕಷ್ಟ ಎನ್ನಲಾಗಿದೆ.

ವೇತನ ಪರಿಷ್ಕರಣೆ ವಿಷಯ ಸಂಬಂಧ ಇಂಡಿಯನ್‌ ಬ್ಯಾಂಕ್‌ ಅಸೋಸಿಯೇಷನ್ ವಿರುದ್ಧ ಡಿ.21ರಂದು ಎಐಬಿಒಸಿ ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕ್‌ ಆಫ್‌ ಬರೋಡಾ, ದೇನಾ ಬ್ಯಾಂಕ್‌ ಮತ್ತು ವಿಜಯ ಬ್ಯಾಂಕ್‌ಗಳ ವಿಲೀನವನ್ನು ವಿರೋಧಿಸಿ ಯುಎಫ್‌ಬಿಯು ಡಿ.26ರಂದು ಮುಷ್ಕರಕ್ಕೆ ಕರೆ ನೀಡಿದೆ. ಅಂದಿನ ಮುಷ್ಕರಕ್ಕೆ ಸಂಬಧಿಸಿದಂತೆ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್‌.ವೆಂಕಟಚಲಂ, ಈ ಮುಷ್ಕರ ಬ್ಯಾಂಕ್‌ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಎಂದು ಹೇಳಿದ್ದಾರೆ.

ಯುಎಫ್‌ಬಿಯು ಅಡಿಯಲ್ಲಿ ಎಲ್ಲಾ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದು ಬ್ಯಾಂಕ್‌ ನೌಕರರ ರಾಷ್ಟ್ರೀಯ ಒಕ್ಕೂಟದ ಉಪಾಧ್ಯಕ್ಷ ಅಶ್ವನಿ ರಾಣಾ ಹೇಳಿದ್ದಾರೆ.

Leave A Reply

Your email address will not be published.