ಗುಡ್ ನ್ಯೂಸ್ : ಸಾಲ ಮನ್ನಾಕ್ಕೆ ಹೆಸರು ನೊಂದಾಯಿಸಿಕೊಳ್ಳಲು ಡಿ. 28ರ ವರೆಗೆ ಅವಕಾಶ ವಿಸ್ತರಣೆ

6,710

ಕರ್ನಾಟಕ ಸರ್ಕಾರವು ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಸಲುವಾಗಿ ಒಂದು ತಂತ್ರಾಂಶವನ್ನು ತಂದಿದ್ದು, ಡಿಸೆಂಬರ್ 31, 2017ರ ತನಕ ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ಸಾಲ ಪಡೆದ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಡಿಸೆಂಬರ್ 28, 2018ರೊಳಗೆ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ತಿಳಿಸಿದ್ದಾರೆ.

ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ ಕನಿಷ್ಠ 40 ರೈತರ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ತದನಂತರದ ರೈತರಿಗೆ ಕ್ರಮಬದ್ದವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್‍ಗಳನ್ನು ನೀಡಿದ ದಿನಾಂಕಗಳಂದು ರೈತರು ಬ್ಯಾಂಕ್ ಶಾಖೆಗೆ ತೆರಳಿ ರೈತರ ಸ್ಯಂ ದೃಢೀಕರಣ ಪತ್ರದೊಂದಿಗೆ ಆಧಾರ್ ಕಾರ್ಡ್, ಪಡಿತರ ಚೀಟಿಗಳ ನಕಲು ಮತ್ತು ಭೂಮಿಯ ಸರ್ವೆ ನಂಬರ್ ವಿವರಗಳನ್ನು ಒದಗಿಸಬೇಕು.

ಏಪ್ರಿಲ್ 1, 2009 ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆಸಾಲಗಳು ಮತ್ತು ಡಿಸೆಂಬರ್ 31, 2017ರ ವರೆಗೆ ಬಾಕಿ ಇರುವ ಬೆಳೆಸಾಲ ಹಾಗೂ ಕೇವಲ ವೈಯಕ್ತಿಕ ಬೆಳೆಸಾಲ ಪಡೆದ ರೈತರು ಮಾತ್ರ ಅರ್ಹರಿರುತ್ತಾರೆ. ಒಂದು ಕುಟುಂಬವು ಗರಿಷ್ಠ ರೂ 2 ಲಕ್ಷ ದವರೆಗೆ ಮಾತ್ರ ಬೆಳೆ ಸಾಲ ಮನ್ನಾ ಪಡೆಯಲು ಅರ್ಹರಿದ್ದು, ಜುಲೈ 5, 2018ಕ್ಕಿಂತ ಮುಂಚಿತವಾಗಿ ಪಡೆದ ರೇಷನ್ ಕಾರ್ಡ್‌ನ್ನು ಕಡ್ಡಾಯವಾಗಿ ಸಲ್ಲಿಸುವವರನ್ನು ಮಾತ್ರ ಪರಿಗಣಿಸಲಾಗುವುದು.

ಯಾವ ರೈತರು ವಾರ್ಷಿಕ ಆದಾಯ ತೆರಿಗೆ ಪಾವತಿದಾರರೋ ಮತ್ತು ರಾಜ್ಯ, ಕೇಂದ್ರ ಸರಕಾರಿ, ಅರೆ ಸರಕಾರಿ, ಸರಕಾರದಿಂದ ಅನುದಾನಕ್ಕೊಳಪಡುವ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಪ್ರತಿ ಮಾಹೆ ರೂ 15,000 ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.

ಅರ್ಹ ರೈತರಿಗೆ ಸಾಲ ಮನ್ನಾ ಯೋಜನೆಯಡಿ ತಮ್ಮ ಬ್ಯಾಂಕ್ ಶಾಖೆಗಳಲ್ಲಿ ನೊಂದಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ನೀಡಲಾಗಿದ್ದು, ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತ ರೀತಿಯಿಂದ ಸರತಿ ಸಾಲಿನಲ್ಲಿ ನಿಂತು ತಮ್ಮ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ ಇದರ ಲಾಭವನ್ನು ಪಡೆಕೊಳ್ಳಬಹುದು.

ಪ್ರತಿ ಬ್ಯಾಂಕ್ ಶಾಖೆಯಲ್ಲಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತನ್ನು ಕೂಡ ನೀಡಲಾಗಿದ್ದು, ರೈತರಿಗೆ ಯಾವುದಾದರೂ ಗೊಂದಲು ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಸಹಾಯವಾಣಿ ಸಂಖ್ಯೆ 08232-231215 ಅಥವಾ 08232231596 ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave A Reply

Your email address will not be published.