ಸ್ಥಾಯಿಸಮಿತಿ ಅಧ್ಯಕ್ಷರ ಚುನಾವಣೆ ಮುಂದೂಡುತ್ತಿರುವ ಮೇಯರ್ ಕ್ರಮಕ್ಕೆ ಆಕ್ರೋಶ

3,550

ಬೆಂಗಳೂರು,ಜ.4- ವಿನಾಕಾರಣ ಸ್ಥಾಯಿಸಮಿತಿ ಅಧ್ಯಕ್ಷರ ಚುನಾವಣೆಯನ್ನು ಮುಂದೂಡುತ್ತಿರುವ ಮೇಯರ್ ಕ್ರಮಕ್ಕೆ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಮುಂದೂಡಿಕೆಯಿಂದ ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನಡೆಯುಂಟಾಗಲಿದೆ ಎಂದರು.

ಪ್ರತಿಬಾರಿ ಬಿಬಿಎಂಪಿ ಬಜೆಟ್‍ನಲ್ಲಿ ಘೋಷಿತವಾಗುವ ಅಭಿವೃದ್ಧಿ ಕಾರ್ಯಗಳಲ್ಲಿ ಶೇ.50ರಷ್ಟು ಪೂರ್ಣಗೊಳ್ಳುತ್ತಿಲ್ಲ. ಇದಕ್ಕೆ ಬಜೆಟನ್ನು ತಡವಾಗಿ ಮಂಡಿಸುವುದೇ ಮುಖ್ಯ ಕಾರಣವಾಗಿದೆ ಎಂದು ಹೇಳಿದರು. ಬಜೆಟ್ ಮಂಡನೆ ತಡವಾಗುವುದರಿಂದ ಆಯಾ ಆರ್ಥಿಕ ವರ್ಷದ ಅಭಿವೃದ್ಧಿ ಕಾಮಗಾರಿಗಳು ಶೇ.50ರಷ್ಟು ಪೂರ್ಣಗೊಳ್ಳುವುದಿಲ್ಲ.

ಮುಖ್ಯಮಂತ್ರಿಗಳು ಫೆ.8ರಂದು ಬಜೆಟ್ ದಿನಾಂಕ ಘೋಷಿಸಿದ್ದಾರೆ. ರಾಜ್ಯ ಬಜೆಟ್‍ನಲ್ಲಿ ನಗರಕ್ಕೆ ಬಿಡುಗಡೆಯಾಗುವ ಅನುದಾನದ ಪ್ರಮಾಣ ನೋಡಿಕೊಂಡು ಕೂಡಲೇ ಬಿಬಿಎಂಪಿ ಬಜೆಟ್ ಮಂಡಿಸಬೇಕು. ಆಗಷ್ಟೇ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲು ಸಾಧ್ಯ ಎಂದು ಬಸವರಾಜು ಅಭಿಪ್ರಾಯಪಟ್ಟರು.

ಬಿಬಿಎಂಪಿ ಬಜೆಟ್ ಮಂಡನೆಗೆ 2 ತಿಂಗಳ ಮುಂಚಿತವಾಗಿಯೇ ಪೂರ್ವ ತಯಾರಿ ಆಗಬೇಕು. ಬಜೆಟ್ ತಯಾರಿಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಪಾತ್ರ ಮಹತ್ತರವಾದುದು. ಅಂತೆಯೇ ಅಭಿವೃದ್ಧಿ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕೆ ವಾರ್ಡ್ ಮಟ್ಟದ ಕಾಮಗಾರಿ ಸಮಿತಿ, ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅತ್ಯಗತ್ಯ. ಆದರೆ ಮೇಯರ್ ಅವರು ವಿನಾ ಕಾರಣ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯನ್ನು ಮುಂದೂಡುತ್ತಿರುವುದರಿಂದ ನಗರದ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ನಾಳೆ ಚುನಾವಣೆ ನಡೆಯಬೇಕಿತ್ತು. ಆದರೆ ಇದುವರೆಗೂ ಯಾವುದೇ ರೀತಿಯ ನೋಟೀಸ್ ಜಾರಿ ಮಾಡಿಲ್ಲ. ಮೇಯರ್ ಅವರ ಈ ವಿಳಂಬ ನೀತಿ ಗಮನಿಸಿದರೆ ಶೂನ್ಯ ಮಾಸ ಕಳೆಯುವವರೆಗೂ ಚುನಾವಣೆ ನಡೆಸುವ ಸಾಧ್ಯತೆ ಕ್ಷೀಣ ಎಂದರು. ಈಗಲಾದರೂ ಮೇಯರ್ ಅವರು ಎಚ್ಚೆತ್ತು ತಕ್ಷಣವೇ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಸಿ, ನಗರದ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗುವಂತೆ ಒತ್ತಾಯಿಸಿದ್ದಾರೆ.

Leave A Reply

Your email address will not be published.


Fatal error: Allowed memory size of 268435456 bytes exhausted (tried to allocate 2097152 bytes) in /home/samagraabhivrudh/public_html/wp-includes/wp-db.php on line 2515