ಸಾಲ ಮನ್ನಾದಿಂದ ಆರ್ಥಿಕ ಪರಿಸ್ಥಿತಿ ಮೇಲೆ ಯಾವುದೇ ಪರಿಣಾಮ ಇಲ್ಲ: ಸಿಎಂ ಕುಮಾರಸ್ವಾಮಿ

7,032

ರೈತರ ಸಾಲ ಮನ್ನಾದಿಂದ ಆರ್ಥಿಕ ಪರಿಸ್ಥಿತಿ ಮೇಲೆ ಯಾವುದೇ ಪರಿಣಾಮವೂ ಇಲ್ಲ ತೊಂದರೆಯೂ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ರವಿವಾರ ನಗರದ ನಗರದ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಮತ್ತು ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಸಂಯೋಜಿತ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಲವು ಸುದ್ದಿ ವಾಹಿನಿಗಳಲ್ಲಿ ರೈತರ ಸಾಲ ಮನ್ನಾದಿಂದ ದೇಶದ ಆರ್ಥಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುತ್ತದೆ ಎಂಬ ವರದಿಗಳನ್ನು ಗಮನಿಸಿದ್ದೇನೆ. ಇದರಿಂದ ಬೇಸರವಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ಸಾಲ ಮನ್ನಾದಿಂದ ಯಾವುದೇ ಆರ್ಥಿಕ ಶಿಸ್ತು ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದರು.ಕಳೆದ ಐದು ವರ್ಷಗಳಿಂದ ಸತತ ಬರದಿಂದ ರೈತ ಸಂಕಷ್ಟದಲ್ಲಿದ್ದ ಆತನ ನೆರವಿಗೆ ಸಾಲ ಮನ್ನಾ ಮಾಡಿದ್ದೇವೆ. ಇದರಿಂದ ಆರ್ಥಿಕ ಪರಿಸ್ಥಿತಿಗೆ ತೊಂದರೆಯಾಗುತ್ತದೆ ಎಂಬ ಸುದ್ದಿಗಳು ನೋವು ತರಿಸಿವೆ. ಅನ್ನದಾತ ರೈತನ ಕಷ್ಟಕ್ಕೆ ಸ್ಪಂದಿಸಿದ್ದೇನೆ ಎಂದು ಕುಮಾರಸ್ವಾಮಿ ನುಡಿದರು.

ದೇಶದ ಬ್ಯಾಂಕ್‌ಗಳಲ್ಲಿ ಸಾಲ ಉಳಿಸಿಕೊಂಡ ದೊಡ್ಡ ದೊಡ್ಡ ಉದ್ಯಮಿಗಳು ಮತ್ತು ಕಂಪೆನಿಗಳಿಗೆ ರಿಯಾಯಿತಿ ನೀಡಲಾಗುತ್ತಿದೆ. ನಮ್ಮ ಸರಕಾರ ರೈತರ ನೆರವಿಗೆ ಬಂದಿರುವುದು ತಪ್ಪೇ ಎಂದು ಅವರು ಪ್ರಶ್ನಿಸಿದರು. ಈ ಕಾಲೇಜಿನ ವಿದ್ಯಾರ್ಥಿಯಾಗಿ ಹೆಸರು ಗಳಿಸುವ ಗೌರವದ ಕೆಲಸ ಮಾಡುತ್ತೇನೆ. ಮುಂದೆ ಇತಿಹಾಸದಲ್ಲಿ ನಾಡಿನ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಹ ಯೋಜನೆಯನ್ನು ರೂಪಿಸಿದವರು ಎಂಬ ರೀತಿಯಲ್ಲಿ ಹೆಸರು ಬರುವಂತೆ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾರ್ಥ ಇಲ್ಲ: ಸಮ್ಮಿಶ್ರ ಸರಕಾರ ನಡೆಸುವುದು ಅಷ್ಟೊದು ಸುಲಭವಲ್ಲ. ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಪಕ್ಷವೂ ಭಾಗಿಯಾಗಿದ್ದು, ಅದಕ್ಕೆ ಅದರದೇ ಆದ ಗುರಿ ಇದೆ. ನನ್ನದು ಯಾವುದೇ ಸ್ವಾರ್ಥ ಗುರಿ ಇಲ್ಲ. ಜನರಿಗೆ ಒಳ್ಳೆಯದು ಮಾಡಬೇಕು, ಯುವಕರಿಗೆ ಕೆಲಸ ಕೊಡಿಸಬೇಕು ಎಂಬುದು ನನ್ನ ಆದ್ಯತೆ ಎಂದರು.

ಈ ಸಂದರ್ಭದಲ್ಲಿ ಎನ್‌ಇಎಸ್ ಸಂಸ್ಥೆಯ ಅಧ್ಯಕ್ಷ ರಾಮರಾವ್, ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಮೆಟ್ರೋಗೆ ಡಾ.ಎಚ್‌ಎನ್ ಹೆಸರು

ಬಸವನಗುಡಿಯ ನ್ಯಾಷನಲ್ ಕಾಲೇಜಿನ ಬಳಿಯ ಮೆಟ್ರೋ ನಿಲ್ದಾಣಕ್ಕೆ ಡಾ. ಎಚ್.ನರಸಿಂಹಯ್ಯ ಹೆಸರನ್ನು ಶಿಫಾರಸ್ಸು ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.

Leave A Reply

Your email address will not be published.